ಯಳಂದೂರು: ದೇಶದ ಸ್ವತಂತ್ರ ಸಂಗ್ರಾಮದಲ್ಲಿ ಅಹಿಂಸೆಯ ಮೂಲಕ ಬ್ರಿಟಿಷರ ದಾಸ್ಯದಿಂದ ಮುಕ್ತಿ ದೊರಕಿಸಿಕೊಟ್ಟ ಮಹಾತ್ಮಗಾಂಧಿ ಹಾಗೂ ಪ್ರಾಮಾಣಿಕತೆಯ ಪ್ರತಿರೂಪದಂತಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರಿ ರವರ ಅನುಕರಣೆ ಪ್ರಸ್ತುತ ಸಮಾಜಕ್ಕೆ ಅವಶ್ಯವಾಗಿದೆ ಎಂದು ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ತಿಳಿಸಿದರು.
ಅವರು ಪಟ್ಟಣ ಪಂಚಾಯತಿಯಲ್ಲಿ ಗುರುವಾರ ನಡೆದ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಹಿಂಸೆಯನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ಗಾಂಧಿಯಾಗಿದ್ದಾರೆ. ಮಹಾತ್ಮಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರ ಜೊತೆಗೆ ರಾಮರಾಜ್ಯದ ಕನಸನ್ನು ಕಂಡಿದ್ದ ಅವರು ಹಳ್ಳಿಗಳ ಉದ್ಧಾರದಿಂದ ದೇಶದ ಪ್ರಗತಿ ಸಾಧ್ಯ ಎಂಬುದನ್ನು ಅರಿತಿದ್ದರು. ಇವರ ಬದುಕೇ ತೆರೆದ ಪುಸ್ತಕವಾಗಿದ್ದು ಇದರ ಅನುಸರಣೆಯಿಂದ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.
ಇದರೊಂದಿಗೆ ಪ್ರಾಮಾಣಿಕತೆ ಹಾಗೂ ದಕ್ಷತೆಗೆ ಹೆಸರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬದುಕು ಕೂಡ ಭಾರತ ದೇಶಕ್ಕೆ ಆದರ್ಶವಾಗಬೇಕಿದೆ. ಇಂತಹ ಮಹಾನ್ ನಾಯಕರು ಬದುಕಿದ್ದ ನಮ್ಮ ದೇಶ ಧನ್ಯ ಎಂದು ಬಣ್ಣಿಸಿದರು. ನಂತರ ಪೌರ ಕಾರ್ಮಿಕರಿಗೆ ಸುರಕ್ಷಾ ಧಿರಿಸುಗಳನ್ನು ವಿತರಣೆ ಮಾಡಲಾಯಿತು.
ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ವೈ.ಜಿ.ರಂಗನಾಥ, ಸುಶೀಲಾ, ಮಹದೇವನಾಯಕ, ಮಂಜು, ಪ್ರಭಾವತಿ ರಾಜಶೇಖರ್, ಸವಿತಾ, ಲಿಂಗರಾಜುಮೂರ್ತಿ, ಶ್ರೀಕಂಠಸ್ವಾಮಿ, ಮುನವ್ವರ್ ಬೇಗ್, ಅರೋಗ್ಯ ನಿರೀಕ್ಷಕ ರಾಘವೇಂದ್ರ, ದೊಡ್ಡಬಸವಣ್ಣ, ಮಲ್ಲಿಕಾರ್ಜುನ, ಲಕ್ಷ್ಮಿ, ವಿಜಯ ಸೇರಿದಂತೆ ಅನೇಕರು ಇದ್ದರು.