ಚಾಮರಾಜನಗರ: ರಕ್ತದಾನದಿಂದ ಹಲವಾರು ಜೀವಗಳನ್ನು ಉಳಿಸಲು ಸಾಧ್ಯವಿದೆ. ಹೀಗಾಗಿ ರಕ್ತದಾನದಂತಹ ಅಮೂಲ್ಯ ಸಹಾಯಕ್ಕಾಗಿ ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಡಿ. ಎಸ್. ರಮೇಶ್ ಅವರು ಸಲಹೆ ಮಾಡಿದರು.
ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನ್ಷಷನ್ಸ್, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಸಿಮ್ಸ್ ರೆಡ್‌ಕ್ರಾಸ್ ಸೊಸೈಟಿ, ಸಮುದಾಯ ಆಧಾರಿತ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಜೆ.ಎಸ್.ಎಸ್. ನರ್ಸಿಂಗ್ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದಿಂದ ಶರೀರದಲ್ಲಿ ಚೈತನ್ಯ ಶಕ್ತಿಯು ಹೆಚ್ಚಾಗಿ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಕಾಣಬಹುದು. ರಕ್ತದಾನದ ಬಗ್ಗೆ ಸುತ್ತಲಿನ ಗೆಳೆಯರಿಗೆ ತಿಳಿಸಿ ಅವರನ್ನು ಸಹ ಇಂತಹ ಉತ್ತಮ ಕಾರ್ಯಗಳಲ್ಲಿ ಭಾಗಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ಜಿಲ್ಲೆಯಲ್ಲಿ ೧೧ ಸಾವಿರ ಯೂನಿಟ್‌ನಷ್ಟು ರಕ್ತವು ಅವಶ್ಯಕವಾಗಿದ್ದು, ಕೇವಲ ೫ ಸಾವಿರದಷ್ಟು ಮಾತ್ರ ಲಭ್ಯವಿದೆ. ರಕ್ತವು ಹೆಚ್ಚು ಅವಶ್ಯಕವಾಗಿರುವುದರಿಂದ ರಕ್ತದಾನಿಗಳು ವೈಯಕ್ತಿಕವಾಗಿ ಮುಂದೆ ಬಂದು ರಕ್ತದಾನದಲ್ಲಿ ತೊಡಗಿಕೊಳ್ಳಬೇಕು. ಪ್ರತಿ ವ್ಯಕ್ತಿಯು ೩೫೦ ಎಂಎಲ್‌ನಷ್ಟು ರಕ್ತವನ್ನು ನೀಡುವುದರಿಂದ ನಾಲ್ಕರಿಂದ ಐದು ಜೀವಗಳಿಗೆ ಸಹಕಾರಿಯಾಗಬಲ್ಲದು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಸ್. ಪೂವಿತಾ ಅವರು ಮಾತನಾಡಿ ರಕ್ತದಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ರಕ್ತ ಅವಶ್ಯಕವಾದಾಗ ಹುಡುಕುವುದಕ್ಕಿಂತ ಮುಂಚೆಯೇ ಎಲ್ಲ ರೀತಿಯ ಕ್ರಮ ವಹಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ರಕ್ತದ ಕೊರತೆಯು ಹೆಚ್ಚಾಗಿರುವುದರಿಂದ ರಕ್ತದಾನದ ಅವಶ್ಯಕತೆಯಿದೆ. ಪ್ರತಿ ೩ ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಕೊರತೆ ಇರುವ ರಕ್ತವನ್ನು ಸಾಧ್ಯವಾದ ಮಟ್ಟಿಗೆ ನಿಭಾಯಿಸಬಹುದು ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ರವಿಕುಮಾರ್ ಅವರು ಮಾತನಾಡಿ ಜೂನ್ ೧೪ ವಿಶ್ವ ರಕ್ತದಾನಿಗಳ ದಿನವಾಗಿದೆ. ರಕ್ತದಾನದ ಕುರಿತು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಅಧಿಕಾರಿ ವರ್ಗಗಳು ಜಾಗೃತಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ. ಅವಶ್ಯಕತೆಗಿಂತ ಕಡಿಮೆ ರಕ್ತ ಇರುವುದರಿಂದ ವೈದ್ಯಕೀಯ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಾರ್ವಜನಿಕರು ರಕ್ತದಾನದಲ್ಲಿ ಹೆಚ್ಚು ಆಸಕ್ತಿ ತೋರಿಸಬೇಕು ಎಂದರು.
ಜಾಥಾವು ಜಿಲ್ಲಾಡಳಿತ ಭವನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಮುಕ್ತಾಯಗೊಂಡಿತು.
ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಹಾಗೂ ಸ್ಥಾನಿಕ ವೈದ್ಯಾಧಿಕಾರಿ ಡಾ. ಮಹೇಶ್, ಬಸವರಾಜೇಂದ್ರ ಆಸ್ಪತ್ರೆಯ ವೈದ್ಯಾಧಿಕಾರಿ ಸಿದ್ದಮಲ್ಲು, ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.