ಗುಂಡ್ಲುಪೇಟೆ: ಹಳೇ ಮೈಸೂರು ಭಾಗದ ಹಿರಿಯ ಕಾಂಗ್ರೆಸ್ ಮುಖಂಡ ಎನ್.ಭಾಸ್ಕರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕೆಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರ್.ಲಕ್ಕೂರು ಒತ್ತಾಯಿಸಿದರು.
ಕೆಪಿಸಿಸಿ ಸದಸ್ಯರು ಹಾಗೂ ಕೆಪಿಸಿಸಿ ಸಂಯೋಜಕರಾಗಿ ಎನ್.ಭಾಸ್ಕರ್ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷರಾಗಿ ನಿರಂತರ ಪಕ್ಷ ಸಂಘಟನೆ ಮಾಡುತ್ತಿದ್ದು, ಹಳೇ ಮೈಸೂರು ಭಾಗದ ದಲಿತ ನಾಯಕರಾಗಿ ಮುಂಚೂಣಿಯಲ್ಲಿದ್ದಾರೆ. ಆದ್ದರಿಂದ ಎನ್.ಭಾಸ್ಕರ್ ಪಕ್ಷಕ್ಕೆ ನೀಡಿರುವ ಸೇವೆ ಪರಿಗಣಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಕಳೆದ 30 ವರ್ಷಗಳಿಂದ ಎನ್.ಭಾಸ್ಕರ್ ಕಾಂಗ್ರೆಸ್ ಪಕ್ಷ ನಿಷ್ಟಾವಂತರಾಗಿ ದುಡಿದು ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಜೊತೆಗೆ ಎಲ್ಲಾ ಸಮುದಾಯದವರು ಹಾಗೂ ವರಿಷ್ಟರ ಜೊತೆ ಉತ್ತಮ ಬಾಂಧವ್ಯವಿದೆ. ಆದ್ದರಿಂದ ಎನ್.ಭಾಸ್ಕರ್ ಅವರ ಹಿರಿಯತನವನ್ನು ಪರಿಗಣಿಸಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಹೈಕಮಾಂಡ್ ವರಿಷ್ಟರು ಇವರನ್ನು ವಿಧಾನ ಪರಿಷತ್ ಸದ್ಯಸರಾಗಿ ಮಾಡಬೇಕು. ಇದರಿಂದ ಹಳೇ ಮೈಸೂರು ಭಾಗದಲ್ಲಿ ಮುಂದಿನ ಲೋಕಾಸಭಾ ಚುನಾವಣೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.