ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿ ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಆರೋಗ್ಯಕರ ಸಿರಿಧಾನ್ಯಗಳ ಮಹತ್ವದ ಕುರಿತು ಅರಿವು ಮೂಡಿಸುವಂತೆ ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ ಅವರು ರೈತರಿಗೆ ಕರೆ ನೀಡಿದರು.
ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ-2024 ರ ಪೂರ್ವಭಾವಿಯಾಗಿ ಕೃಷಿ ಜಂಟಿ ನಿರ್ದೇಶಕ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಿರಿಧಾನ್ಯಗಳಿಂದ ತಯಾರಿಸುವ ಖಾದ್ಯಗಳ ಪಾಕಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ 25 ಜನ ಮಹಿಳೆಯರು ಭಾಗವಹಿಸಿ ಸಿರಿಧಾನ್ಯಗಳಿಂದ ಅರ್ಕಾ ಕಿಲ್ಸ, ಊದಲು ಶಾವಿಗೆ ಪಾಯಸ, ರಾಗಿ ಕಿಲ್ಸ, ಸಿರಿಧಾನ್ಯದ ಉಂಡೆ, ನವಣೆ ಪಾಯಸ, ಬರಗು ಕೇಸರಿಬಾತ್, ಸಿರಿಧಾನ್ಯ ಕೇಕ್, ನವಣೆ ಹೋಳಿಗೆ, ಹುರಿಹಿಟ್ಟಿನ ಉಂಡೆ, ಸಜ್ಜೆ ಲಾಡು, ಹಲ್ವ, ಸಾಮೆ ಹಿಟ್ಟಿನ ತಾಳಿಪೆಟ್ಟು, ಬರಗು ಪಾಪಡ್ ಚಾಟ್ಸ್, ನವಣೆ ಉಪ್ಪಿಟ್ಟು, ಖಾರ ಪೊಂಗಲ್, ದೋಸೆ, ಕಿಚಡಿ, ಸಿರಿಧಾನ್ಯ ತಾಳಿಪಟ್ಟು, ಬಿಸಿಬೇಳೆ ಬಾತ್, ಪಕೋಡ, ಕೆಸುವಿನ ಸೊಪ್ಪಿನ ಪತ್ರೊಡೆ, ಅರ್ಕ ಪಲಾವ್ ಹೀಗೆ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸಿದರು.
ಪ್ರತಿಭಾ ಪಾಟಿಲ್ ಭದ್ರಾವತಿ ಇವರು ತಯಾರಿಸಿದ ಊದಲು ಶಾವಿಗೆ ಪಾಯಸ ಹಾಗೂ ಖಾರದ ಖಾದ್ಯ ತಯಾರಿಸಿದ ಲೀಲಾವತಿ ಸೀಗೆಬಾಗಿ ಇವರಿಗೆ ಪ್ರಥಮ ಸ್ಥಾನದೊಂದಿಗೆ ರಾಜ್ಯ ಮಟ್ಟದ ಪಾಕ ಸ್ಪರ್ಧೆಗೆ ಆಯ್ಕೆಯಾದರು. ತೀರ್ಪುಗಾರರಾಗಿ ಪ್ರಾಧ್ಯಾಪಕರು, ಆಹಾರ ಮತ್ತು ಪೌಷ್ಟಿಕ ಭದ್ರತೆ, ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆಗಳ ಮಹಾವಿದ್ಯಾಲಯ, ಇರುವಕ್ಕಿ, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ, ಶಿವಮೊಗ್ಗ ಹಾಗೂ ಕೃಷಿ ವಿಜ್ಞಾನ ಕೇಂದ್ರ, ನವಿಲೆಯ ಪ್ರಾಧ್ಯಾಪಕರು ಭಾಗವಹಿಸಿದ್ದರು, ಶಿವಮೊಗ್ಗ, ಸಾಗರದ ಉಪ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.