ವರದಿ : ವಿನಯ್ ದೊಡ್ಡಕೊಪ್ಪಲು
ಹುಣಸೂರು: ತಾಲೂಕಿನ ಜನಧ್ವನಿ ಫೌಂಡೇಶನ್ ವತಿಯಿಂದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳ ೧೧೭ನೇ ಜಯಂತಿಯನ್ನು ಗಿಡನೆಡುವ ಮೂಲಕ ವಿಶಿಷ್ಟವಾಗಿ ಅಚರಿಸಲಾಯಿತು.
ನಗರದ ಮೂರೂರಮ್ಮ ದೇವಾಲಯದ ಆವರಣದಲ್ಲಿ ಫೌಂಡೇಶನ್ ಅಧ್ಯಕ್ಷ ಪ್ರವೀಣ್ ಪಿ ಅಯರಹಳ್ಳಿ ಗಿಡನೆಟ್ಟು ಮಾತನಾಡಿ, ಏಪ್ರಿಲ್ ಒಂದನೇ ದಿನಾಂಕವನ್ನು ಏಪ್ರಿಲ್ ಫೂಲ್ ಎಂದು ಆಚರಿಸುತ್ತೇವೆ. ಏ.೧ ಈ ನಾಡು ಕಂಡ ದಾರ್ಶನಿಕ, ಅಕ್ಷರ ಸಂತ ಶ್ರೀ ಶಿವಕುಮಾರಸ್ವಾಮಿಗಳ ಜಯಂತಿಯ ದಿನವೂ ಆಗಿದ್ದು, ಯುವಸಮುದಾಯ ಅನ್ನದಾಸೋಹಿಯ ಸ್ಮರಣಾರ್ಥ ಗಿಡನೆಡುವ ಪುಣ್ಯ ಕಾರ್ಯ ಮಾಡುವ ಮೂಲಕ ಸಾರ್ಥಕತೆಯನ್ನು ಅನುಭವಿಸೋಣ. ಎಲ್ಲರನ್ನೂ ದಡ್ಡರನ್ನಾಗಿಸುವ ಬದಲು ಎಲ್ಲರೊಳಗೊಂಡು ಸಮೃದ್ಧ ಸಮಾಜ ಸೃಷ್ಟಿ ಇಂದಿನ ಅಗತ್ಯವಾಗಿದೆ. ಫೌಂಡೇಶನ್ ವತಿಯಿಂದ ದೇವಾಲಯದ ಸುತ್ತ ಗಿಡಗಳನ್ನು ನೆಟ್ಟು ಪೋಷಿಸಲಾಗುವುದು ಎಂದರು.
ಫೌಂಡೇಶನ್ ಕಾನೂನು ಸಲಹೆಗಾರ ಪ್ರವೀಣ್, ದೇವಾಲಯದ ಅರ್ಚಕರು ಇತರರು ಹಾಜರಿದ್ದರು.