ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹಾಡ್ಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದು ಜೆಡಿಎಸ್ ಪಕ್ಷ ಬೆಂಬಲಿತರು ಒಂದು ಸ್ಥಾನವು ಗೆಲ್ಲದೇ ಸೋಲುಂಡಿದ್ದಾರೆ.
ಸಾಲಗಾರರ ಕ್ಷೇತ್ರದ 11 ನಿರ್ದೇಶಕ ಸ್ಥಾನಗಳು ಮತ್ತು ಸಾಲಗಾರರ 1 ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿಯೂ ಕಾಂಗ್ರೆಸ್ಸಿಗರು ಅತ್ಯಧಿಕ ಬಹುಮತದೊಂದಿಗೆ ಜಯಭೇರಿ ಬಾರಿಸಿದರು.
ತಾಲೂಕಿನಾಧ್ಯಂತ ಬಾರಿ ಕುತೂಹಲ ಕೆರಳಿಸಿದ್ದ ಸಹಕಾರ ಸಂಘದ ಚುನಾವಣೆಯಲ್ಲಿ ಪ್ರಸ್ತುತ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದವರು ಮತ್ತೆ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಆ ಮೂಲಕ ಪಕ್ಷ ತನ್ನ ಪ್ರಾಬಲ್ಯ ಮೆರೆದಿದೆ.
ಸಾಲಗಾರರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹೆಚ್. ಡಿ. ವೀರಭದ್ರಪ್ಪ, ಹೆಚ್. ಸಿ. ಮಹದೇವಪ್ಪ, ಶಂಕರ್, ಕೆಂಪೇಗೌಡ, ಎಂ, ಈರಯ್ಯ, ವೃಷಬೇಂದ್ರಪ್ಪ, ಕೃಷ್ಣ, ಎ.ಜೆ. ಹರೀಶ್, ಕೆ. ಟಿ. ರಾಮಕೃಷ್ಣ, ಎಸ್ ಕವಿತಾ, ಕಾತ್ಯಾಯಿನಿ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಕಣದಲ್ಲಿದ್ದ ಚಂದ್ರಶೇಖರ್ ಜಯಶಾಲಿಯಾದರು.
ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಗಳು ಶಾಸಕ ಡಿ ರವಿಶಂಕರ್ ಮತ್ತು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡ ಸ್ವಾಮೇಗೌಡ ಹಾಗೂ ಪಕ್ಷದ ಪರವಾಗಿ ಜಯಕಾರದ ಘೋಷಣೆಗಳನ್ನು ಮೊಳಗಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್. ಸಿ. ಪ್ರಸಾದ್, ಸಂಘದ ಮಾಜಿ ಅಧ್ಯಕ್ಷ ಟಿ.ಸಿ.ವಿಶ್ವನಾಥ್, ಮಾಯಿಗೌಡನಹಳ್ಳಿ ಗ್ರಾಪಂ ಅಧ್ಯಕ್ಷ ಕರಿಯಪ್ಪ, ಹೊಸಕೋಟೆ ಸೋಮನಹಳ್ಳಿಜಗದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಮಾಜಿ ಗ್ರಾ.ಪಂ.ಅಧ್ಯಕ್ಷ ಬೀರೇಗೌಡ, ಪಾನಿಮಹೇಶ್, ಮಾಜಿ ಸದಸ್ಯರಾದ ಆಶಿಮಲ್ಲಿಕಾರ್ಜುನ, ರಘು, ಹೆಚ್.ಜೆ.ರಮೇಶ್, ಮುಖಂಡರಾದ ಷಣ್ಮುಖ, ಹಾಡ್ಯಕಿರಣ್, ಜಲೇಂದ್ರ, ರಾಕೇಶ್, ಮಹದೇವ್, ಕಗ್ಗಳ ಮುತ್ತು, ರಾಜಶೇಖರಯ್ಯ, ಚೌಡನಾಯಕ ಮತ್ತಿತರರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.
ಶಾಸಕ ಡಿ.ರವಿಶಂಕರ್ ನಾಯಕತ್ವಕ್ಕೆ ಸಿಕ್ಕ ಗೆಲುವು: ಹಾಡ್ಯಮಹದೇವಸ್ವಾಮಿ
ಹಾಡ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಜಯಗಳಿಸಿರುವುದು ಶಾಸಕ ಡಿ. ರವಿಶಂಕರ್ ಮತ್ತು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡ ಸ್ವಾಮೇಗೌಡ ಅವರ ನಾಯಕತ್ವಕ್ಕೆ ಸಂದ ಜಯವಾಗಿದೆ ಎಂದು ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಹೇಳಿದರು.
ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಎಲ್ಲಾ 12 ಮಂದಿಯನ್ನು ಅಭಿನಂದಿಸಿ ಮಾತನಾಡಿದ ಅವರು ಕಳೆದ ಐದು ವರ್ಷದಲ್ಲಿ ಪಕ್ಷದ ಬೆಂಬಲಿತ ನಿರ್ದೇಶಕರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಮತದಾರರು ಮತ್ತೆ ಬೆಂಬಲ ನೀಡಿದ್ದು ಇದಕ್ಕಾಗಿ ಪಕ್ಷದ ಪರವಾಗಿ ರೈತ ಸದಸ್ಯರನ್ನು ಅಭಿನಂದಿಸುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ ಶಾಸಕ ಡಿ. ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿ ಕೆಲಸ ನಿರ್ವಹಿಸಿ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಿದ್ದು ಈ ವಿಚಾರದಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.