Thursday, July 9, 2026
Google search engine

HomeUncategorizedರಾಷ್ಟ್ರೀಯಪ್ರವಾಹದಲ್ಲಿ ಕೊಚ್ಚಿಹೋದ 1200 LPG ಸಿಲಿಂಡರ್‌ಗಳು; ತಪ್ಪಿದ ಭಾರೀ ಅನಾಹುತ

ಪ್ರವಾಹದಲ್ಲಿ ಕೊಚ್ಚಿಹೋದ 1200 LPG ಸಿಲಿಂಡರ್‌ಗಳು; ತಪ್ಪಿದ ಭಾರೀ ಅನಾಹುತ

ರಾಯಗಡ (ಮಹಾರಾಷ್ಟ್ರ): ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಸುಮಾರು 1200 LPG ಗ್ಯಾಸ್ ಸಿಲಿಂಡರ್‌ಗಳು ಕೊಚ್ಚಿಹೋಗಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಆದರೆ ಸಿಲಿಂಡರ್‌ಗಳು ಖಾಲಿಯಾಗಿದ್ದರಿಂದ ಯಾವುದೇ ಸ್ಫೋಟ ಅಥವಾ ಅನಾಹುತ ಸಂಭವಿಸಿಲ್ಲ ಎಂಬುದು ಸಮಾಧಾನಕರ ಸಂಗತಿ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಯಗಡ ಜಿಲ್ಲೆಯ ಖಲಾಪುರ ತಾಲ್ಲೂಕಿನ ಚಾವ್ನೆ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡ್ಡಗಾಡು ಪ್ರದೇಶಗಳಿಂದ ಹರಿದು ಬಂದ ನೀರು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಗ್ಯಾಸ್ ಘಟಕದ ಆವರಣಕ್ಕೆ ನುಗ್ಗಿದೆ. ನೀರಿನ ರಭಸಕ್ಕೆ ತುತ್ತಾದ ಘಟಕದಲ್ಲಿ ಮರುಪೂರಣಕ್ಕಾಗಿ ಸಂಗ್ರಹಿಸಲಾಗಿದ್ದ ಸುಮಾರು 1200 ಖಾಲಿ LPG ಸಿಲಿಂಡರ್‌ಗಳು ಪ್ರವಾಹದ ನೀರಿನಲ್ಲಿ ತೇಲಿ ಕೊಚ್ಚಿಹೋಗಿವೆ.

ಘಟನೆಯ ಬಳಿಕ ಸ್ಥಳೀಯ ಆಡಳಿತ, ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ದೋಣಿಗಳ ನೆರವಿನಿಂದ ನದಿ, ಹಳ್ಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಲಿಂಡರ್‌ಗಳನ್ನು ಪತ್ತೆಹಚ್ಚಿ ಮರುಪಡೆಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ನಡುವೆ HPCL ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಘಟನೆ ಕುರಿತು ತನಿಖೆ ಆರಂಭಿಸಿದ್ದು, ಭವಿಷ್ಯದಲ್ಲಿ ಇಂತಹ ಪ್ರವಾಹ ಪರಿಸ್ಥಿತಿಯಲ್ಲಿ ಗ್ಯಾಸ್ ಘಟಕಗಳ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಯೋಜನೆ ರೂಪಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular