ವಿಜಯಪುರ: ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಬಿಸಿಲಿಗೆ ಅಮಾಯಕ ಜೀವಗಳು ಬಲಿಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ 15 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗಿ ಗ್ರಾಮದ ಶ್ರೀಶೈಲ ಬಿರಾದಾರ (15) ಮೃತಪಟ್ಟ ಬಾಲಕ. ಬೇಸಿಗೆ ರಜೆ ಇದ್ದ ಕಾರಣ ಬಾಲಕ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಆಟವಾಡಿದ್ದ ಎನ್ನಲಾಗಿದೆ. ಬಿಸಿಲಿನ ತಾಪಕ್ಕೆ ತೀವ್ರವಾಗಿ ಅಸ್ವಸ್ಥಗೊಂಡ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.
ಇನ್ನೂ ರಾಯಚೂರಿನಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳಿದ್ದ ಹುಸೇನಪ್ಪ (45) ಎಂಬ ಕಾರ್ಮಿಕ ಕೆಲಸ ಮಾಡುತ್ತಿದ್ದಾಗಲೇ ಬಿಸಿಲಿನ ತಾಪ ತಾಳಲಾರದೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಕಳೆದ ವಾರವಷ್ಟೇ ರಾಯಬಾಗ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ್ ಬಳ್ಳಾರಿ (35) ಎಂಬುವವರು ಈ ಬಿಸಿಲ ಜಳಕ್ಕೆ ಸಾವನ್ನಪ್ಪಿದ್ದರು.
ರಾಜ್ಯಾದ್ಯಂತ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಹೀಟ್ ಸ್ಟ್ರೋಕ್ ವಾರ್ಡ್‌ಗಳನ್ನು ತೆರೆದಿದೆ. ಇದರೊಟ್ದಟಿಗೆ ವೈದ್ಯರು ಸಾರ್ವಜನಿಕರಿಗೆ ಈ ಕೆಳಗಿನ ಎಚ್ಚರಿಕೆಗಳನ್ನು ನೀಡಿದ್ದಾರೆ:
ವಿಶೇಷವಾಗಿ ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರು ಬಿಸಿಲಿಗೆ ಅಥವಾ ಮನೆಯಿಂದ ಹೊರ ಹೋಗದಂತೆ ಜಾಗ್ರತೆ ವಹಿಸಬೇಕು.
ಬಾಯಾರಿಕೆ ಇಲ್ಲದಿದ್ದರೂ ಅತೀ ಹೆಚ್ಚು ನೀರು, ಮಜ್ಜಿಗೆ, ಎಳನೀರು ಅಥವಾ ಓಆರ್‌ಎಸ್ (ORS) ಸೇವಿಸುತ್ತಿರಿ.
ಸುಸ್ತು, ತಲೆತಿರುಗುವಿಕೆ ಅಥವಾ ಅತಿಯಾದ ವಾಂತಿಯಾದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ.



