ಶಿವಮೊಗ್ಗ : ಕೆಲ ದಿನಗಳ ಹಿಂದೆ ಯಾದಗಿರಿ ಜಿಲ್ಲೆಯಲ್ಲಿ ಶಾಲಾ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದ ಘಟನೆ ವರದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ, ಮನೆಯ ಶೌಚಾಲಯದಲ್ಲಿ 15 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿಗೆ ಹೆರಿಗೆಯಾದ ನಂತರ ಬಾಲಕಿಗೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಬಾಲಕಿಯ ಪೋಷಕರು ದೂರು ನೀಡಿರುವ ದೂರಿನ ಅನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
15 ವರ್ಷದ ಬಾಲಕಿಯು ಗರ್ಭ ಧರಿಸಲು ಆಕೆಯ 16 ವರ್ಷದ ಅಣ್ಣನೇ ಕಾರಣ ಎಂದು ಪೋಷಕರು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ. ಬಾಲಕಿಯು 9ನೇ ತರಗತಿ ಓದಿದ್ದು, ಶಾಲೆ ಬಿಟ್ಟು ಮನೆಯಲ್ಲಿಯೇ ಇರುತ್ತಿದ್ದಳು. ಪೋಷಕರು ಕೆಲಸಕ್ಕೆ ಹೋದಾಗ ಸಹೋದರ ದುಷ್ಕೃತ್ಯ ಎಸಗಿದ್ದಾನೆ.
ಬಾಲಕಿಯು ಏಳೂವರೆ ತಿಂಗಳಿಗೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೋಷಕರು ನೀಡಿದ ದೂರಿನಂತೆ, 16 ವರ್ಷದ ಬಾಲಕನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.