ಧಾರವಾಡ : ಧಾರವಾಡದಲ್ಲಿ ಕಲುಷಿತ ನೀರು ಸೇವನೆಯಿಂದ 19 ಮಂದಿ ಅಸ್ವಸ್ಥರಾಗಿದ್ದಾರೆ. ನೀರು ಕುಡಿದ ಕೆಲವೇ ಗಂಟೆಗಳಲ್ಲಿ ಆ ರೋಗ್ಯದಲ್ಲಿ ವ್ಯತ್ಯಾಸ ಆಗಿದೆ.
ಧಾರವಾಡದ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಘಟನೆ ನಡೆದಿದೆ. ನೀರು ಕುಡಿದ ಬಳಿಕ ಜನರು ಜ್ವರದಿಂದ ಬಳಲಿದ್ದು, ಬಳಿಕ ವಾಂತಿ, ಭೇದಿ, ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಈ ಬಾರಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಬೇರೆ ಬೇರೆ ಕಡೆಗಳಿಂದ ನೀರು ಕೆರೆಗೆ ಹರಿದುಬಂದಿದೆ. ಕೆರೆ ನೀರು ಕಲುಷಿತಗೊಂಡ ಕಾರಣದಿಂದ ಜನರಿಗೆ ಜ್ವರ ಬಂದಿದ್ದು, ವಾಂತಿ, ಭೇದಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ. ಆರೋಗ್ಯ ವ್ಯತ್ಯಾಸದಿಂದ ಜನರು ಕಂಗಾಲಾಗಿದ್ದಾರೆ.
ಅತಿಯಾಗಿ ಭೇದಿ ಮತ್ತು ಹೊಟ್ಟೆ ನೋವಿನಿಂದ ಬಳಲಿ ನವಲಗುಂದ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತಹಸೀಲ್ದಾರ್ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ 19ಮಂದಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ. ಮತ್ತಷ್ಟು ಜನರಿಗೆ ಸಣ್ಣಪುಟ್ಟ ನಿತ್ರಾಣರಾಗಿದ್ದು , ವೈದ್ಯರು ತುರ್ತಾಗಿ ಚಿಕಿತ್ಸೆ ನೀಡಿದ್ದಾರೆ. ತಹಸೀಲ್ದಾರ್ ಕೆಲವು ಹಿರಿಯ ಅಧಿಕಾರಿಗಳನ್ನು ಕರೆಸಿ ಮಾತುಕತೆ ಸಹ ನಡೆಸಿದ್ದಾರೆ. ಸದ್ಯ ಎಲ್ಲರ ಅರೋಗ್ಯ ಸುಧಾರಿಸಿದ್ದು, ಪ್ರಾಣಕ್ಕೆ ಅಪಾಯ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.