ಮಂಗಳೂರು ದಕ್ಷಿಣ ಕನ್ನಡ: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ೨೨೦.೮೨೫ ಕೆಜಿ ಗಾಂಜಾ ಸೇರಿದಂತೆ ಒಟ್ಟು ೬೫,೩೩.೨೮೦ ರೂ. ಮೌಲ್ಯದ ಮಾದಕ ವಸ್ತುಗಳನ್ನು ಶುಕ್ರವಾರ ನಾಶ ಮಾಡಲಾಯಿತು.
ನ್ಯಾಯಾಲಯದ ಆದೇಶದ ಮೇರೆಗೆ ಮುಲ್ಕಿಯ ಸಸ್ಟೇನೆಬಿಲಿಟಿ ಹೆಲ್ತ್‌ಕೇರ್ ಸೊಲ್ಯೂಶನ್ಸ್ ಲಿಮಿಟೆಡ್‌ನಲ್ಲಿ ಮಾದಕ ವಸ್ತುಗಳ ವಿಲೇ ಕಾರ್ಯ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಅವರ ಸಮ್ಮುಖದಲ್ಲಿ ನಡೆಯಿತು. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ೯ ಠಾಣೆಗಳಲ್ಲಿ ಒಟ್ಟು ೩೪ ಪ್ರಕರಣಗಳಲ್ಲಿ ಗಾಂಜಾ ಜತೆಗೆ ೧೯೩.೧೫೧ ಗ್ರಾಂ ಎಂಡಿಎಂಎ ಮತ್ತು ೩೦ ಗ್ರಾಂ ಮೆಥಾಂಫೆಟಮೈನ್ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಒಟ್ಟು ೧೧.೩೬೫ ಕೆಜಿ ಗಾಂಜಾ ಹಾಗೂ ೪೨.೫೭ ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ಶುಕ್ರವಾರ ವಿಲೇ ಮಾಡಲಾಯಿತು. ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಮಾದಕ ವಸ್ತು ವಿಲೇವಾರಿ ಕಮಿಟಿ ಮೂಲಕ ಈ ವಿಲೇ ಕಾರ್ಯ ನಡೆಸಿರುವುದಾಗಿ ಪೊಲೀಸ್ ಪ್ರಕಟನೆ ತಿಳಿಸಿದೆ.
