ಮೈಸೂರು: ಪ್ರತಿ ವರ್ಷದಂತೆ ಈ ಬಾರಿಯೂ ವಿಭಿನ್ನ ರೀತಿಯಲ್ಲಿ ಸ್ವಾತಂತ್ರ್ಯ ಮಹೋತ್ಸವ ಆಚರಣೆಗೆ ತಯಾರಿ ನಡೆಸಿರುವ ಮೈಸೂರು ಜಿಪಂ ಈ ಬಾರಿ ೨೫೬ ಗ್ರಾಪಂನಲ್ಲೂ ವೀರ ಸೇನಾನಿಗಳ ಶಿಲಾಫಲಕಂ ಅನಾವರಣಗೊಳಿಸಿ ಸ್ವಾತಂತ್ರ್ಯ ಮಹೋತ್ಸವ ಅರ್ಥಪೂರ್ಣವಾಗಿಸಲಿದೆ.
ಕಳೆದ ಬಾರಿ ಕೆರೆಗಳ ಅಂಗಳದಿ ಬಾವುಟ ಹಾರಿಸಿ ದಾಖಲೆ ಬರೆದಿದ್ದ ಮೈಸೂರು ಜಿ.ಪಂ ಈಗ ಅಷ್ಟು ಕೆರೆಗಳಲ್ಲೂ ಶಿಲಾ ಫಲಕಂ ಜಾರಿ ಜತೆಗೆ ಪ್ರತಿ ಕೆರೆ ಅಂಗಳದಿ ಸಸಿ ನೆಡುವ ಯೋಜನೆ ರೂಪಿಸಿದೆ. ರಾಜ್ಯ ಸರ್ಕಾರ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚನೆ ಮೇರೆಗೆ ಸ್ವಾತಂತ್ರೋತ್ಸವ ಆಚರಣೆ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಹುತಾತ್ಮ ಯೋಧರ ಗೌರವಾರ್ಥ ಶಿಲಾಫಲಕ ಸ್ಥಾಪಿಸಿದೆ. ಈ ವೀರ ಶಿಲಾಫಲಕದಲ್ಲಿ ಗ್ರಾಮ ಪಂಚಾಯಿತಿಯ ಹೆಸರು, ಪ್ರಧಾನ ಮಂತ್ರಿಗಳ ಘೋಷವಾಕ್ಯ, ಮುಖ್ಯಮಂತ್ರಿಗಳ ಘೋಷವಾಕ್ಯ, ವಚನಕಾರ ಬಸವಣ್ಣನವರ ವಚನ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿನ ದೇಶಕ್ಕಾಗಿ ಮಡಿದ ವೀರ ಯೋಧರ ಹೆಸರುಗಳನ್ನು ಬರೆದಿರಲಿದೆ.
ಗ್ರಾ.ಪಂ ವ್ಯಾಪ್ತಿಯ ಅಮೃತ ಸರೋವರ ಬಳಿ ಅಥವಾ ಅಮೃತ ಸರೋವರ ಲಭ್ಯವಿಲ್ಲದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಅಥವಾ ಸರ್ಕಾರಿ ಶಾಲೆಯ ಬಳಿ ನಿರ್ಮಿಸಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೇಶಕ್ಕಾಗಿ ಮಡಿದ ವೀರ ಯೋಧರು ಇಲ್ಲದಿದ್ದಲ್ಲಿ ಮಾತೃಭೂಮಿಯ ಘನತೆ ಹಾಗೂ ಸ್ವಾತಂತ್ರ್ಯ ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರರಿಗೆ ಪ್ರಣಾಮಗಳು ಎಂದು ಬರೆಸುವಂತೆ ತಿಳಿಸಲಾಗಿದೆ. ಭೂಮಿಯನ್ನು ಹಸಿರೀಕರಣಗೊಳಿಸಲು ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಜೀವ ವೈವಿಧ್ಯ ಹಾಗೂ ನಾನಾ ವಿಧವಾದ ಸಸಿಗಳನ್ನು ನೆಟ್ಟು ಸ್ವಾತಂತ್ರ್ಯ ಮಹೋತ್ಸವ ಹಸಿರೀಕರಣಕ್ಕೂ ಆದ್ಯತೆ ನೀಡಲು ಸಜ್ಜಾಗಿರುವುದು ಈ ಬಾರಿಯ ವಿಶ
ವಸುಧ ವಂದನಾಕ್ಕೂ ಚಾಲನೆ: ೭೭ನೇ ಸ್ವಾತಂತ್ರ್ಯ ಮಹೋತ್ಸವದ ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ನಮ್ಮ ದೇಶಕ್ಕಾಗಿ ವಿಶೇಷವಾಗಿ ತ್ಯಾಗ ಬಲಿದಾನ ಮಾಡಿದ ವೀರರಿಗೆ ಗೌರವ ಸಲ್ಲಿಸಲು ಮೇರಾ ಮಾಟಿ ಮೇರಾ ದೇಶ (ನಮ್ಮ ನೆಲ, ನಮ್ಮ ದೇಶ) ಎಂಬ ಕಾರ್ಯಕ್ರಮದ ಅಂಗವಾಗಿ ಭೂಮಿಯನ್ನು ಹಸಿರೀಕರಣಗೊಳಿಸುವ ಉದ್ದೇಶದಿಂದ ಸಸಿಗಳನ್ನು ನೆಟ್ಟು ಅಮೃತ ವಾಟಿಕವನ್ನು ಅಭಿವೃದ್ಧಿಪಡಿಸುವ ವಸುಧ ವಂದನ ಕಾರ್ಯಕ್ರಮಕ್ಕೂ ಇದೇ ವೇಳೆ ಗಣ್ಯರು ಚಾಲನೆ ನೀಡಲಿದ್ದಾರೆ. ಪ್ರತಿ ಗ್ರಾ.ಪಂನ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸಿದ ಕೆರೆ ಅಥವಾ ಶಾಲಾ-ಕಾಲೇಜು, ಆಸ್ಪತ್ರೆ ಹಾಗೂ ಸರ್ಕಾರಿ ಕಟ್ಟಡದ ಆವರಣದಲ್ಲಿ ಗಿಡ ನೆಟ್ಟು ಸ್ವಾತಂತ್ರ್ಯ ಮಹೋತ್ಸವ ಆಚರಣೆಯಲ್ಲಿ ಸಂಭ್ರಮಿಸಲು ತಯಾರಿ ನಡೆಸಿದೆ.
ರಾಷ್ಟ್ರ ರಾಜಧಾನಿಗೆ ಮಣ್ಣಿನ ಕಲಶ: ತಾಲ್ಲೂಕು ಹಂತದಲ್ಲಿ ಮಣ್ಣಿನ ಕಲಶವನ್ನು ದೆಹಲಿಗೆ ಕಳುಹಿಸಿಕೊಡುವುದಕ್ಕಾಗಿ ತಾ.ಪಂ ಇಒ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಎಲ್ಲಾ ಗ್ರಾ.ಪಂ ಗಳಿಂದ ಮಣ್ಣನ್ನು ಸಂಗ್ರಹಿಸಿ ಸ್ವಯಂ ಸೇವಕರ ಮೂಲಕ ತಾಲೂಕು ಮಟ್ಟಕ್ಕೆ ತರಬೇಕು. ಎಲ್ಲಾ ಗ್ರಾ.ಪಂ ಗಳಿಂದ ಬಂದ ಮಣ್ಣನ್ನು ಸ್ವೀಕರಿಸಿ, ಒಟ್ಟುಗೂಡಿಸಿ, ಸರ್ವಾಲಂಕೃತ ಕಲಶದಲ್ಲಿ ಇಟ್ಟು, ಕಲಶವನ್ನು ರಾಷ್ಟ್ರ ರಾಜಧಾನಿಗೆ ಸ್ವಯಂ ಸೇವಕರ ಮೂಲಕ ಗೌರವಗಳೊಡನೆ ಕಳುಹಿಸಲು ಕ್ರಮವಹಿಸುವುದು. ಮಣ್ಣಿನ ಕಲಶವನ್ನು ರಾಷ್ಟ್ರ ರಾಜಧಾನಿಗೆ ಕೊಂಡೊಯ್ಯಲು ಸ್ವಯಂ ಸೇವಕರನ್ನು ನೆಹರು ಯುವಕ ಕೇಂದ್ರದವರು ಆಯ್ಕೆ ಮಾಡಿ ಕಳುಹಿಸಬೇಕು ಎಂದು ತಿಳಿಸಲಾಗಿದೆ.
೨೫೬ ಗ್ರಾಮ ಪಂಚಾಯಿತಿಗಳಲ್ಲಿಯೂ ಸರ್ಕಾರದ ಸೂಚನೆಯಂತೆ ಶಿಲಾಫಲಕಂ ಹಾಗೂ ವಸುಧ ವಂದನಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾ.ಪಂ ವ್ಯಾಪ್ತಿಯ ಯೋಧರು ಅಥವಾ ಗಣ್ಯರು ಪಾಲ್ಗೊಂಡು ಸ್ವಾತಂತ್ರ್ಯ ಮಹೋತ್ಸವ ಆಚರಣೆ ಮಾಡಲಿದ್ದಾರೆ.
-ಕೆ.ಎಂ.ಗಾಯಿತ್ರಿ, ಜಿ.ಪಂ ಸಿಇಒ