ಮುಂಬೈ: ಅಮೀರ್ ಖಾನ್ ನಟನೆಯ ೩ ಈಡಿಯಟ್ಸ್ ನಲ್ಲಿ ಗ್ರಂಥಪಾಲಕ ದುಬೆ ಪಾತ್ರದಲ್ಲಿ ನಟಿಸಿ ಹೆಸರುವಾಸಿಯಾದ ನಟ ಅಖಿಲ್ ಮಿಶ್ರಾ ನಿಧನರಾಗಿದ್ದಾರೆ.
ಆಮಿರ್ ಖಾನ್ ನಟನೆಯ ೩ ಇಡಿಯಟ್ಸ್, ದಿಲ್ ಚಾಹ್ತಾ ಹೈ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟ ಅಖಿಲ್ ಮಿಶ್ರ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ ೫೮ ವರ್ಷ ವಯಸ್ಸಾಗಿತ್ತು. ಸೆಪ್ಟೆಂಬರ್ ೧೯ರಂದು ತಮ್ಮ ನಿವಾಸದಲ್ಲಿ ಅಡುಗೆ ಮನೆಯಲ್ಲಿ ಟೇಬಲ್ ಹತ್ತಿ ಏನೋ ಕೆಲಸ ಮಾಡುವಾಗ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು. ತೀವ್ರ ರಕ್ತಸ್ರಾವದಿಂದ ಅಖಿಲ್ ನಿಧನ ಹೊಂದಿದ್ದಾರೆ.
೨೦೦೯ರಲ್ಲಿ ಅಖಿಲ್, ಜರ್ಮನ್ ಮೂಲದ ನಟಿ ಸುಜಾನೆ ಬರ್ನರ್ಟ್ ಅವರನ್ನು ೨೦೦೯ ರಲ್ಲಿ ವಿವಾಹವಾಗಿದ್ದರು. ಸುಜಾನೆ ಬರ್ನರ್ಟ್ ೨೦೦೬ರಿಂದ ಹಿಂದಿ ಸಿನಿಮಾ ಹಾಗೂ ಧಾರಾವಾಹಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಸೌಟಿ ಜಿಂದಗೀ ಕಿ, ಜಾನ್ಸಿ ಕೀ ರಾಣಿ, ಸಿಐಡಿ, ಅಶೋಕ ಸಾಮ್ರಾಟ್, ಹಜಾರೋಮೆ ಮೇರಿ ಬೆಹನಾ ಹೈ, ಯೇ ರಿಶ್ತಾ ಕ್ಯಾ ಕೆಹಲಾತಾ ಹೈ ಇನ್ನೂ ಹಲವಾರು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಅಖಿಲ್, ಹಠಾತ್ ನಿಧನಕ್ಕೆ ಟಿವಿ ಹಾಗೂ ಸಿನಿಮಾ ಲೋಕದ ಹಲವು ನಟರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಸುಜಾನೆ ಬರ್ನರ್ಟ್, ನನ್ನ ಹೃದಯ ಚೂರಾಗಿದೆ, ನಾನು ನನ್ನ ಅರ್ಧ ಭಾಗವನ್ನು ಕಳೆದುಕೊಂಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.