Sunday, February 1, 2026
Google search engine

Homeರಾಜಕೀಯಕರ್ನಾಟಕಕ್ಕೆ ₹63,049 ಕೋಟಿ ತೆರಿಗೆ ಪಾಲು: ಅನ್ಯಾಯವಿಲ್ಲ ಎಂದ HDK

ಕರ್ನಾಟಕಕ್ಕೆ ₹63,049 ಕೋಟಿ ತೆರಿಗೆ ಪಾಲು: ಅನ್ಯಾಯವಿಲ್ಲ ಎಂದ HDK

ನವದೆಹಲಿ : ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದರು.

ಆಯವ್ಯಯದ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ ಎಂದು ರಾಜ್ಯ ಸರ್ಕಾರ ಸಾಮಾನ್ಯವಾಗಿ ದೂರುತ್ತಿತ್ತು. 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ 4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ 3.64 ಹಂಚಿಕೆ ಮಾಡಿತ್ತು. ಹೊಸದಾಗಿ ಹಂಚಿಕೆ ಆಗಿರುವುದರ ಮೂಲಕ ರಾಜ್ಯಕ್ಕೆ 2026-27ನೇ ಸಾಲಿನಲ್ಲಿ 63,049 ಕೋಟಿ ರೂ. ತೆರಿಗೆ ಪಾಲು ದೊರೆಯಲಿದೆ. ಇನ್ನುಮುಂದೆ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಕೇಂದ್ರವನ್ನು ಟೀಕೆ ಮಾಡುವುದನ್ನು ಬಿಡಬೇಕು ಎಂದರು.

ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನಿರಾಶೆಯೇನೂ ಆಗಿಲ್ಲ. ತೆಂಗು ಪ್ರೋತ್ಸಾಹ ಯೋಜನೆಯಡಿ ತೆಂಗಿನ ಉತ್ಪಾದನೆ ಹೆಚ್ಚಳಕ್ಕೆ ಉತ್ತೇಜನ ಕೊಡಲಾಗಿದೆ. ಹಾಗೆಯೇ ಗೋಡಂಬಿ ಮತ್ತು ಕೋಕೋವನ್ನು 2030ರ ವೇಳೆಗೆ ಪ್ರೀಮಿಯಂ ಗ್ಲೋಬಲ್ ಬ್ರಾಂಡ್ ಆಗಿ ರೂಪಿಸುವ ಅಂಶವು ಮುಂಗಡ ಪತ್ರದಲ್ಲಿ ಸೇರಿದೆ. ಶ್ರೀಗಂಧ, ತೆಂಗು ಬೆಳೆ, ಕೋಕೋ ಬೆಳೆಗೆ ವಿಶೇಷ ಯೋಜನೆ ಮೂಲಕ ರಾಜ್ಯದ ಹಲವಾರು ಜಿಲ್ಲೆಗಳಿಗೆ ಉಪಯೋಗ ಆಗುತ್ತದೆ ಎಂದು ತಿಳಿಸಿದರು.

ಹೈದರಾಬಾದ್-ಬೆಂಗಳೂರು, ಬೆಂಗಳೂರು ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ರಾಜ್ಯಕ್ಕೆ ವರದಾನವಾಗಲಿದೆ. ಈಗಾಗಲೇ ರಾಜ್ಯದ ಹಲವು ವೇಗದ ರೈಲುಗಳು ಕಾರ್ಯಾಚರಿಸುತ್ತಿದ್ದು, ವಂದೇ ಭಾರತ್ ರೈಲುಗಳು ಕೂಡ ಸೇರ್ಪಡೆಯಾಗಿದೆ. ಈಗ ಹೈಸ್ಪೀಡ್ ರೈಲುಗಳು ರಾಜ್ಯಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಪರ್ಕದಲ್ಲಿ ಹೊಸ ಕ್ರಾಂತಿ ಆಗಲಿದೆ ಎಂದು ಪ್ರತಿಪಾದಿಸಿದರು.

ಇದು ಕೇವಲ ಅಂಕಿ ಅಂಶಗಳ ಮುಂಗಡ ಪತ್ರವಲ್ಲ, ಬದಲಿಗೆ ಮುನ್ನೋಟ, ಮುಂದಾಲೋಚನೆ, ವಿಕಾಸ, ಫಲಿತಾಂಶ ಆಧರಿತ ಮುಂಗಡ ಪತ್ರವಾಗಿದೆ. ವಿಕಸಿತ ಭಾರತ ಗುರಿ ಸಾಕಾರಕ್ಕೆ ಇದು ಪೂರಕವಾಗಿದೆ. 2047ಕ್ಕೆ ನಾವು ಈ ಗುರಿ ಸಾಧನೆ ಮಾಡಬೇಕು, ಅದಕ್ಕೆ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಬಜೆಟ್ ಸ್ಪಷ್ಟ ದಿಕ್ಸೂಚಿ ತೋರಿದೆ ಎಂದು ಹೇಳಿದರು.

ಗ್ರಾಮೀಣ ಭಾರತಕ್ಕೆ ಮನ್ನಣೆ ಕೊಡಲಾಗಿದೆ. ಪ್ರತಿ ರಾಜ್ಯ, ಪ್ರತಿ ಜಿಲ್ಲೆ, ಪ್ರತಿ ತಾಲೂಕು, ಪ್ರತಿ ಪಂಚಾಯಿತಿ, ಪ್ರತಿ ಹಳ್ಳಿ ಮುಂಗಡಪತ್ರದಲ್ಲಿ ಒಳಗೊಂಡಿದೆ. ವಿಶಾಲ, ವಿಸ್ತೃತ, ವಿಕಾಸ; ಇದು ಮೋದಿ ಅವರ ಲೋಕದೃಷ್ಟಿ. ಅದಕ್ಕೆ ತಕ್ಕಂತೆ ಮುಂಗಡಪತ್ರ ಮೂಡಿ ಬಂದಿದೆ ಎಂದು ಕೊಂಡಾಡಿದರು.

RELATED ARTICLES
- Advertisment -
Google search engine

Most Popular