ಮಂಡ್ಯ: ಶಾಲಾ ಶಿಕ್ಷಣ ಇಲಾಖೆ, ಸ್ಕೂಲ್ ಗೇಮ್ಸ್ ಆಫ್ ಇಂಡಿಯಾ ಹಾಗೂ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿ ೬೭ನೇ ರಾಷ್ಟ್ರಮಟ್ಟದ ೧೯ ವಷದೊಳಗಿನ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾವಳಿಯು ಜನವರಿ ೨೪ ರಿಂದ ೨೭ ರವರೆಗೆ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ೬೭ನೇ ರಾಷ್ಟ್ರಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾವಳಿಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ೪ ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾವಳಿಗೆ ೨೯ ರಾಜ್ಯಗಳಿಂದ ಬರುವ ಆಟಗಾರರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದರು.
ಆಂದ್ರಪ್ರದೇಶ, ಬಿಹಾರ್, ಸಿ.ಬಿ.ಎಸ್.ಇ ವೆಲ್ ಫೇರ್ ಸ್ಪೋರ್ಟ್ಸ್ ಸಂಸ್ಥೆ, ಚಂಡಿಗರ್, ಛತ್ತಿಸ್ ಗಡ್, ಕೌನ್ಸಿಲ್ ಫಾರ್ ದಿ ಇಂಡಿಯಾನ್ ಸ್ಕೂಲ್, ದಾದ್ರ ಮತ್ತು ನಗರ ಹಾವೆಲಿ ಮತ್ತು ದಮನ್, ದವ್ ಕಾಲೇಜ್ ಮ್ಯಾನೇಜಿಂಗ್ ಕಮಿಟಿ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಾಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ?ಟ್ರ, ನವೋದಯ ವಿದ್ಯಾಲಯ ಸಮಿತಿ, ಒಡಿಸ್ಸಾ, ಪುದುಚೇರಿ,ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ವಿದ್ಯಾಭಾರತಿ, ಪಶ್ಚಿಮ ಬಂಗಾಳದ ಸೇರಿದಂತೆ ಒಟ್ಟು ೨೯ ರಾಜ್ಯದ ತಂಡಗಳು ಭಾಗವಹಿಸಲಿದ್ದಾವೆ.
೨೯ ಬಾಲಕರ ತಂಡ ಹಾಗೂ ೨೮ ಬಾಲಕಿಯರ ತಂಡಗಳು ಭಾಗವಹಿಸಲಿದ್ದು, ಒಟ್ಟಾರೆ ಎಲ್ಲಾ ತಂಡಗಳ ೩೪೬ ಬಾಲಕರು, ೩೩೬ ಬಾಲಕಿಯರು ಸೇರಿದಂತೆ ಒಟ್ಟು ೬೮೨ ಕಬ್ಬಡಿ ಆಟಗಾರರು ಭಾಗವಹಿಸಲಿದ್ದಾರೆ ಎಂದರು. ಭಾಗವಹಿಸುವ ಆಟಗಾರರಿಗೆ ಬಸ್ ವ್ಯವಸ್ಥೆ, ಆಹಾರ, ವಸತಿ, ೩ ಆಂಬುಲೆನ್ಸ್, ಮೆಡಿಕಲ್ ( ನುರಿತ ವೈದ್ಯರು ಹಾಗೂ ನರ್ಸ್ ಒಳಗೊಂಡಂತೆ) ವ್ಯವಸ್ಥೆಗಳನ್ನು ಕಲ್ಪಿಸಿಲಾಗಿದೆ. ಯಾವುದೇ ಅಹಿತಕರ ಅನುಭವ ಆಗದಂತೆ ಎಚ್ಚರ ವಹಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ಕಾರ್ಯಕ್ರಮವನ್ನು ಜನವರಿ ೨೪ ರಂದು ಬೆಳಿಗ್ಗೆ ೧೦ ಗಂಟೆಗೆ ಆದಿಚುಂಚನಗಿರಿ ಕ್ಷೇತ್ರದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಉದ್ಘಾಟಿಸಲಿದ್ದು, ಶಾಲಾ ಶಿಕ್ಷಣ ಇಲಾಖೆಯ ಸಚಿವರಾದ ಮಧುಬಂಗಾರಪ್ಪ ಘನ ಉಪಸ್ಥಿತಿ ವಹಿಸಲಿದ್ದಾರೆ ಎಂದರು.
ಆದಿಚುಂಚನಗಿರಿ ಮಠದ ಪೀಠಾದ್ಯಕ್ಷರಾದ ಶ್ರೀ ಶ್ರೀ ಡಾ.ನಿರ್ಮಲನಂದನಾಥಸ್ವಾಮೀಜಿ ಅವರು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದೆ ಸುಮಲತಾ ಅಂಬರೀಶ್, ವಿಧಾನ ಪರಿಷತ್ ಶಾಸಕ ಮರಿತಿಬ್ಬೆಗೌಡ, ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ ವಿಧಾನಸಭೆ ಶಾಸಕ ಪಿ.ಎಂ ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ ಮಂಜು, ಕೆ.ಎಂ ಉದಯ್ ಭಾಗವಹಿಸಲಿದ್ದಾರೆ.
ಅಂತರಾಷ್ಟ್ರೀಯ ಕಬ್ಬಡಿ ಕ್ರೀಡಾಪಟು ಹಾಗೂ ಏಕಲವ್ಯ ಪ್ರಶಸ್ತಿ ವಿಜೇತರಾದ ಸುಖೇಶ್ ಹೆಗ್ಗಡೆ ಅವರು ವಿಶೇಷ ಅಹ್ವಾನಿತರಾಗಿ ಭಾಗವಹಿಸಲಿದ್ದಾರೆ.