ಉಡುಪಿ: ದೇಶಾದ್ಯಂತ ೭೮ನೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆ ನಡೆಯುತ್ತಿದೆ. ಗೃಹಲಕ್ಷ್ಮೀ ಯೋಜನೆಯಿಂದಾಗ ರಾಜ್ಯದಲ್ಲಿ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷಕ್ಕೂ ಅಧಿಕ ಮಹಿಳೆಯರು ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಇಂದು ಗುರುವಾರ ಉಡುಪಿ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ಬಳಿಕ ಮಾತನಾಡಿದ ಸಚಿವರು, ಉಡುಪಿ ಜಿಲ್ಲೆಯೊಂದರಲ್ಲೇ ೨.೨೦ ಲಕ್ಷ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಕೆಲವು ತಾಂತ್ರಿಕ ದೋಷದಿಂದ ಜೂನ್ ಹಾಗೂ ಜುಲೈ ತಿಂಗಳ ಹಣ ಜಮೆಯಾಗಿಲ್ಲ. ಕಳೆದ ಗುರುವಾರದಿಂದ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಯಿಂದ ಏಳು ಕೋಟಿ ಮಹಿಳೆಯರಿಗೆ ಅನುಕೂಲ ೧.೨ ಕೋಟಿ ಜನ ಬಡತನ ರೇಖೆಯಿಂದ ಮೇಲಕ್ಕೆ ಬಂದಿದ್ದಾರೆ. ಮನೆ ಬಾಗಿಲಲೇ ತಪಾಸಣೆ ನಡೆಸಿ ಅಗತ್ಯ ಔಷಧಿ ಒದಗಿಸುವ ಗೃಹ ಆರೋಗ್ಯ ಯೋಜನೆ ಕೂಡ ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ಜಾರಿ ಮಾಡಲಾಗುತ್ತಿದೆ. ಮಧುಮೇಹ ಮತ್ತು ಅಧಿಕ ರಕ್ತದ ಒತ್ತಡ ಸಮಸ್ಯೆ ಇರುವವರಿಗೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆ ಮನೆಗೆ ಒದಗಿಸುವ ಯೋಜನೆ ಜಾರಿಯಾಗಲಿದೆ ಎಂದರು.