Tuesday, March 10, 2026
Google search engine

Homeರಾಜಕೀಯ‘ಅವನ್ಯಾರು ಇಲ್ಲಿ ಮಾತನಾಡೋಕೆ?’ ಜಮೀರ್ ನಡೆಗೆ ಸಚಿವ ಮಲ್ಲಿಕಾರ್ಜುನ ಅಸಮಾಧಾನ

‘ಅವನ್ಯಾರು ಇಲ್ಲಿ ಮಾತನಾಡೋಕೆ?’ ಜಮೀರ್ ನಡೆಗೆ ಸಚಿವ ಮಲ್ಲಿಕಾರ್ಜುನ ಅಸಮಾಧಾನ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ವಿಚಾರವಾಗಿ ಜಿಲ್ಲಾ ರಾಜಕಾರಣದಲ್ಲಿ ದಿಢೀರ್ ಸಂಚಲನ ಸೃಷ್ಟಿಯಾಗಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಡೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ಅವನ್ಯಾರು ಇಲ್ಲಿ ಬಂದು ಮಾತನಾಡೋಕೆ, ನಮ್ಮ ಕ್ಷೇತ್ರಗಳಿವು. ಇವೆಲ್ಲ ಸರಿ ಇರಲ್ಲ. ಇಲ್ಲಿ ಬಂದು ಮಾತನಾಡೋಕೆ ಅವನಿಗೆ ಅಧಿಕಾರ ಕೊಟ್ಟವರು ಯಾರು? ಪಕ್ಷದ ಸಭೆ ಕರೆದಾಗ ನಾನು ಈ ಬಗ್ಗೆ ಮಾತನಾಡುತ್ತೇನೆ, ಈಗ ಮಾತನಾಡಲ್ಲ’ ಎಂದು ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.

ಇನ್ನೂ ಜನವರಿ 26ರಂದು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವ ಜಮೀರ್ ಅಹ್ಮದ್, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಬಗ್ಗೆ ಹೈಕಮಾಂಡ್ ಮತ್ತು ವರಿಷ್ಠರಿಗೆ ಮನವಿ ಮಾಡುವುದಾಗಿ ಜಮೀರ್ ನೀಡಿದ್ದ ಹೇಳಿಕೆ ಈಗ ಮಲ್ಲಿಕಾರ್ಜುನ ಅವರ ಕೆಂಗಣ್ಣಿಗೆ ಗುರಿಯಾಗಿದೆ.

ಇದೇ ವೇಳೆ ಸಚಿವ ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಅವರಿಗೆ ಟಿಕೆಟ್ ನೀಡಬೇಕೆಂದು ಕೆಲವು ನಾಯಕರು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಸಭೆ ಕರೆದಾಗ ನಾಯಕರು ಏನು ಹೇಳುತ್ತಾರೆ ಎಂಬುವುದನ್ನು ಕೇಳೋಣ. ಹೈಕಮಾಂಡ್ ತೆಗೆದುಕೊಳ್ಳುವ ಅಂತಿಮ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಬಳಿಕ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದ ಸಚಿವರು, ನಮಗೆ ಗೆಲ್ಲುವ ಸೂಕ್ತ ಅಭ್ಯರ್ಥಿಬೇಕು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಒಮ್ಮತವಿದೆ. ನಾನು ಅಭ್ಯರ್ಥಿ ಆಯ್ಕೆಯನ್ನು ಕಾರ್ಯಕರ್ತರ ನಿರ್ಧಾರಕ್ಕೆ ಬಿಡುತ್ತೇನೆ. ಎಲ್ಲಾ ಸಮುದಾಯದವರು ಸೇರಿ ಚರ್ಚಿಸಿ, ಕಾರ್ಯಕರ್ತರು ಯಾರನ್ನು ಸೂಚಿಸುತ್ತಾರೋ ಅವರನ್ನೇ ಚುನಾವಣಾ ಕಣಕ್ಕಿಳಿಸುತ್ತೇವೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular