ಕಲಬುರಗಿ : ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಳಿಯ ಪೆಟ್ಟು ಬಿದ್ದರೆ ಶಿಲೆ ಕೂಡ ಮೂರ್ತಿ ಆಗುತ್ತೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತ ಗೊಂದಲ ಮುಂದುವರೆದಿರುವುದರ ನಡುವೆ ಡಿಕೆಶಿ ಆಡಿದ ಈ ಮಾತುಗಳು ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಮ್ಮ ಸ್ವಂತ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆಯನ್ನು ಹಾಡಿ ಹೊಗಳಿ, ಕನಕಪುರದಲ್ಲಿ ಅಲ್ಲಿನ ಜನ ನನ್ನನ್ನು ಗೆಲ್ಲಿಸಿದ್ದಂತೆ, ಚಿತ್ತಾಪುರದಲ್ಲಿ ನೀವು ಯಾವಾಗಲೂ ಪ್ರಿಯಾಂಕ್ ಖರ್ಗೆಯವರನ್ನು ಗೆಲ್ಲಿಸಿ. ನೀವು ಯಾವಾಗಲೂ ಖರ್ಗೆ ಮತ್ತು ಕಾಂಗ್ರೆಸ್ ಕುಟುಂಬದ ಜೊತೆಗೆ ಇರಿ ಎಂದು ಕರೆ ನೀಡಿದರು.
ಮುಂದುವರೆದು, ನಮ್ಮ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ. ನಾವು ಐದು ಗ್ಯಾರಂಟಿಗಳನ್ನು ಕೊಟ್ಟು ನಿಮ್ಮ ಬದುಕಿಗೆ ಸಹಾಯ ಕಲ್ಪಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ ಗ್ಯಾಸ್ ದರ ಏರಿಕೆ ಮಾಡಿ, ಜನಸಾಮಾನ್ಯರ ಬದುಕಿಗೆ ಬರೆ ಎಳೆದಿದೆ. ಇದಕ್ಕೆ ಬಿಜೆಪಿ ಸಂಸದರು ಉತ್ತರ ಕೊಡಬೇಕು ಎಂದರು.
ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತ ಗೊಂದಲ ಮುಂದುವರೆದಿರುವುದರ ನಡುವೆಯೇ ಖರ್ಗೆ ಜೊತೆ ಡಿಕೆಶಿ ಪ್ರಯಾಣ ಬೆಳೆಸಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು.



