ಹಾಸನ : ಇಲ್ಲಿನ ಮೆಗಾ ಡೈರಿ ಉದ್ಘಾಟನೆ ಕಾರ್ಯಕ್ರಮ ಮೇ 20ರ ನಂತರ ನಡೆಯಲಿದ್ದು, ಹಬ್ಬದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ನಗರದ ಹಾಸನ ಹಾಲು ಒಕ್ಕೂಟದ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಾಲು ಉತ್ಪಾದಕರ ಸಂಘದ ಸುಮಾರು 1.10 ಲಕ್ಷ ಸದಸ್ಯರನ್ನು ಆಹ್ವಾನಿಸುತ್ತಿದ್ದು, ಪುರುಷರಿಗೆ ಬಿಳಿ ಪಂಚೆ, ಶರ್ಟ್ ಹಾಗೂ ಮಹಿಳೆಯರಿಗೆ ಒಂದೇ ಬಣ್ಣದ ಸೀರೆ ವಿತರಿಸಲಾಗುವುದು. ಒಕ್ಕೂಟದ ಅಧಿಕಾರಿ, ಸಿಬ್ಬಂದಿಗೂ ಹೊಸ ಉಡುಪು ನೀಡಲಾಗುವುದು. ಅಂದಿನ ಊಟ, ಉಪಾಹಾರಕ್ಕೆ ಒಕ್ಕೂಟದ ವತಿಯಿಂದ ವೆಚ್ಚ ಮಾಡಲಾಗುವುದು ಎಂದರು.
ಮುಂದುವರೆದು, ಮೆಗಾ ಡೈರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಶು ಸಂಗೋಪನ ಸಚಿವರು, ಕೇಂದ್ರದ ಸಚಿವರನ್ನೂ ಆಹ್ವಾನಿಸಲಾಗುವುದು ಎಂದರು. ಮೆಗಾ ಡೈರಿಗೆ ಹಾಲು ಒಕ್ಕೂಟದಿಂದಲೇ ₹400 ಕೋಟಿ ಭರಿಸಲಾಗಿದ್ದು, ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್ (ಎನ್‌ಡಿಡಿಬಿ) ಮೂಲಕ ₹150 ಕೋಟಿ ಸಾಲ ಪಡೆಯಲಾಗಿದೆ. ಎಲ್ಲ ಕಾಮಗಾರಿಗಳನ್ನು ಕೆಎಂಎಫ್ ಮೂಲಕವೇ ಟೆಂಡರ್ ಕರೆದು ಮಾಡಲಾಗಿದ್ದು, ನಮ್ಮಿಂದ ಎಲ್ಲ ಬಿಲ್ ಪಾವತಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ, 1977ರಲ್ಲಿ 104 ಹಾಲು ಉತ್ಪಾದಕರ ಸಹಕಾರ ಸಂಘದೊಂದಿಗೆ ಪ್ರಾರಂಭವಾದ ಡೈರಿಗೆ 1993 -94ನೇ ಸಾಲಿನಲ್ಲಿ ನಾನು ಅಧ್ಯಕ್ಷನಾದೆ. ಅಧಿಕಾರ ಸ್ವೀಕರಿಸಿದಾಗ ₹3.5 ಕೋಟಿ ನಷ್ಟದಲ್ಲಿತ್ತು. ಇಂದು ₹2,775 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ. ಇಂದು 1,728 ಸಂಘಗಳ ಮೂಲಕ 13.9 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುತ್ತಿದೆ. ಪ್ರತಿದಿನ ಹಾಸನ ಹಾಲು ಒಕ್ಕೂಟದಿಂದ 2 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದರೆ. ಹೈದರಾಬಾದ್‌ನಲ್ಲಿ 2.30 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಬೆಂಗಳೂರಿನ ಕೆಎಂಎಫ್ ಮೂಲಕ 9-10 ಲಕ್ಷ ಲೀಟರ್ ಹಾಲು ಮಾರಾಟ ಆಗುತ್ತಿದೆ ಎಂದು ತಿಳಿಸಿದರು.
1994ರಿಂದ ಈವರೆಗೆ ಸುಮಾರು 31 ವರ್ಷ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು, ಒಕ್ಕೂಟವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಇಚ್ಛೆ ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಯುವ ಸಮುದಾಯ ಈ ಒಕ್ಕೂಟವನ್ನು ಮತ್ತಷ್ಟು ಸದೃಢವಾಗಿ ಬೆಳೆಸುವ ವಿಶ್ವಾಸ ಹೊಂದಿರುವುದಾಗಿ ರೇವಣ್ಣ ಹೇಳಿದರು.
ಒಕ್ಕೂಟದ ನಿರ್ದೇಶಕರಾದ ದೇವರಾಜೇಗೌಡ, ನಾರಾಯಣಗೌಡ, ಸೋಮನಹಳ್ಳಿ ಸತೀಶ್, ರಾಮಚಂದ್ರೇಗೌಡ, ಚನ್ನೇಗೌಡ, ಜಗದೀಶ್, ಹೇಮಂತ್ ಕುಮಾರ್, ಮಹೇಶ್, ಮಾನಸ ಪಟೇಲ್, ಸೌಜನ್ಯ, ರೂಪೇಶ್, ಸ್ವಾಮಿಗೌಡ, ಲಿಂಗರಾಜು, ಬಸವರಾಜು, ವಸಂತಾ, ಆಶಾ, ನಾಗೇಶ್, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ರಮೇಶ್, ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಎಚ್.ಡಿ. ರೇವಣ್ಣ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಶಾಸಕ ಕೆಎಂಎಫ್ ನಿರ್ದೇಶನದಂತೆ ಎನ್‌ಡಿಡಿಬಿ ಅಭಿವೃದ್ಧಿಪಡಿಸಿರುವ ಜೆಎಂಸಿಎಸ್ ಕಾಮನ್ ಸಾಫ್ಟ್‌ವೇರ್ ಅನ್ನು ಒಕ್ಕೂಟದ 1665 ಸಂಘಗಳಲ್ಲಿ ಅಳವಡಿಸಲಾಗಿದ್ದು, ಇದರಿಂದ ಉತ್ಪಾದಕರು ಹಾಲು ಹಾಕಿದ ಕೂಡಲೇ ಗುಣಮಟ್ಟದ ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ. ₹5.50 ಕೋಟಿ ಲಾಭದ ನಿರೀಕ್ಷೆ 2025-26ನೇ ಸಾಲಿನಲ್ಲಿ ಒಕ್ಕೂಟವು ಗರಿಷ್ಠ 15.12 ಲಕ್ಷ ಲೀಟರ್ ಹಾಲು ಸಂಗ್ರಹಣೆ ದಾಖಲಿಸಿದ್ದು ₹2725 ಕೋಟಿ ವಹಿವಾಟಿನ ಗುರಿ ಹೊಂದಿದೆ. ₹5.50 ಕೋಟಿ ನಿವ್ವಳ ಲಾಭ ನಿರೀಕ್ಷಿಸಲಾಗಿದೆ ಎಂದು ರೇವಣ್ಣ ವಿವರಿಸಿದರು.
ರೈತರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಹಾಲಿನ ಖರೀದಿ ದರ ಪರಿಷ್ಕರಿಸಲಾಗುತ್ತಿದ್ದು, ಪ್ರಸ್ತುತ ಸಂಘಗಳಿಗೆ ಲೀಟರ್‌ಗೆ ₹36.17 ಹಾಗೂ ಉತ್ಪಾದಕರಿಗೆ ₹34.50 ದರ ನೀಡಲಾಗುತ್ತಿದೆ. ಸಂಘಗಳ ಕಟ್ಟಡ ನಿರ್ಮಾಣ ಬಿಎಂಸಿ ಕಟ್ಟಡಗಳು ಖನಿಜ ಮಿಶ್ರಣ ಸಾಫ್ ಕಿಟ್ ವೆಟ್‌ಫಿನ್ ಗೋಧಾರ ಶಕ್ತಿ ಹಾಲು ಕರೆಯುವ ಯಂತ್ರಗಳು ಪ್ರಥಮ ಚಿಕಿತ್ಸಾ ಔಷಧಿ ಮೇವು ಕತ್ತರಿಸುವ ಯಂತ್ರಗಳು ರಬ್ಬರ್ ಮ್ಯಾಟ್ ಖರೀದಿ ಹಾಗೂ ಮೇವು ಅಭಿವೃದ್ಧಿ ಚಟುವಟಿಕೆಗಳಿಗೆ ಒಕ್ಕೂಟದಿಂದ ಅನುದಾನ ನೀಡಲಾಗುತ್ತಿದ್ದು ಒಟ್ಟು ₹25.40 ಕೋಟಿ ಸಹಾಯಧನ ನೀಡಲು ಉದ್ದೇಶಿಸಲಾಗಿದೆ.
66 ಎಕರೆಯಲ್ಲಿ ಮೆಗಾ ಡೈರಿ ಹಾಸನದ ಕೈಗಾರಿಕಾ ವಸಾಹತಿನ 66 ಎಕರೆ ಜಾಗದಲ್ಲಿ ಸುಮಾರು ₹735 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಮೆಗಾ ಡೈರಿ ಘಟಕವು 10 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿದೆ. ಅಗತ್ಯವಿದ್ದರೆ 15 ಲಕ್ಷ ಲೀಟರ್‌ವರೆಗೆ ಹೆಚ್ಚಿಸುವ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ 60 ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಘಟಕ ನಿರ್ಮಾಣ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.
ಮೆಗಾ ಡೈರಿ ಆವರಣದಲ್ಲಿ ₹70 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಿಸುತ್ತಿದ್ದು, ಉದ್ಯಾನ ಕಾರಂಜಿ ಕೆಫೆಟೇರಿಯಾ ಮುಖ್ಯ ಪ್ರವೇಶ ದ್ವಾರ ಹಾಗೂ ಆಂತರಿಕ ರಸ್ತೆಗಳ ನಿರ್ಮಾಣ ಒಳಗೊಂಡಿರಲಿದೆ. ಜೊತೆಗೆ ರೈತರು ಉತ್ತಮ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳು ಗ್ರಾಮೀಣ ಯುವಕರನ್ನು ಕೃಷಿ ಹಾಗೂ ಹೈನೋದ್ಯಮಕ್ಕೆ ಆಕರ್ಷಿಸುವ ವಿವಿಧ ಕಾರ್ಯಕ್ರಮಗಳು ಹಾಗೂ ಹಾಸನದಲ್ಲೇ ವಿನೂತನವಾದ ಆಡಿಟೋರಿಯಂ ನಿರ್ಮಾಣ ಮಾಡುವ ಯೋಜನೆ ಕೂಡ ಇದರಲ್ಲಿ ಸೇರಿದೆ ಎಂದು ತಿಳಿಸಿದರು.



