ಮೈಸೂರು: “ಆರೋಗ್ಯವೇ ಭಾಗ್ಯ” ಎಂಬುದು ಅಕ್ಷರಶಃ ಸತ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯವು ಸಂತೋಷ, ಉತ್ಪಾದಕತೆ ಮತ್ತು ಜೀವನದ ಒಟ್ಟಾರೆ ಯೋಗಕ್ಷೇಮಕ್ಕೆ ಅತ್ಯಗತ್ಯ ಎಂದು ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ನಾಡೋಜ ಪ್ರೊ.ಭಾಷ್ಯಂ ಸ್ವಾಮೀಜಿ ಅವರು ಅಭಿಪ್ರಾಯಿಸಿದರು.

ನಟ.ದಿ.ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಇಲ್ಲಿನ ದಟ್ಟಗಳ್ಳಿಯ ನೇತಾಜಿ ವೃತ್ತದ ಬಳಿ ಇರುವ ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಣ ಅಥವಾ ಆಸ್ತಿಯಿಂದ ಭೌತಿಕ ವಸ್ತುಗಳನ್ನು ಕೊಳ್ಳಬಹುದು, ಆದರೆ ಆರೋಗ್ಯವನ್ನು ಕೊಳ್ಳಲು ಸಾಧ್ಯವಿಲ್ಲ. ಉತ್ತಮ ಆರೋಗ್ಯವೇ ನೈಜ ಸಂಪತ್ತು ಮತ್ತು ಜೀವನದ ಅತಿದೊಡ್ಡ ಆಸ್ತಿಯಾಗಿದೆ ಎಂದ ಅವರು, ಆರೋಗ್ಯವಿದ್ದರೆ ಮಾತ್ರ ಜೀವನದ ಸಂತೋಷವನ್ನು ಅನುಭವಿಸಲು ಸಾಧ್ಯ.ಆದ್ದರಿಂದ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು ಎಂದು ಸಲಹೆ ನೀಡಿದರು.
ಈ ಆಸ್ಪತ್ರೆಯ ಉದ್ಘಟನೆಯನ್ನು ನಟ ಪುನೀತ್ ರಾಜ್ ಕುಮಾರ್ ಅವರ ಅಮೃತ ಹಸ್ತದೊಂದಿಗೆ ನೆರವೇರಿಸಬೇಕು ಎಂಬುದು ನಮ್ಮೆಲ್ಲರ ಕನಸಾಗಿತ್ತು.ಆದರೆ ದುರದೃಷ್ಟವಷಾತ್ ಪುನೀತ್ ಅವರು ನಿಧನರಾದರು.ಒದು ನಿಜಕ್ಕೂ ಅತ್ಯಂತ ವಿಷಾದಕರ ಎಂದು ಬೇಸರಿಸಿದ ಭಾಷ್ಯಂ ಸ್ವಾಮೀಜಿ ಅವರು, ತದನಂತರ ನಮ್ಮ ಮನವಿಗೆ ಒಗೊಟ್ಟು ನಟ ಶಿವರಾಜ್ ಕುಮಾರ್ ಅವರು ಆಸ್ಪತ್ರೆಯನ್ನು ಜನಸೇವೆಗೆ ಲೋಕಾರ್ಪಣೆಗೊಳಿಸದರು. ಅಂದಿನಿಂದ ಇಂದಿನವರೆಗೂ ಕಡು ಬಡವರಿಂದ ಹಿಡಿದು ಎಲ್ಲರಿಗೂ ಅತ್ಯುತ್ತಮ , ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇವರ ಸೇವೆ ಹೀಗೆ ಮುಂದುವರೆಯಲಿ ಎಂದು ಆಶೀರ್ವದಿಸಿದರಲ್ಲದೇ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ನಾವು ಅನಾರೋಗ್ಯಕ್ಕೆ ಒಳಗಾದರೆ, ನಮ್ಮ ಅಮೂಲ್ಯ ಸಮಯ ಕಳೆದುಹೋಗುತ್ತದೆ ಮತ್ತು ಅದು ನಮ್ಮ ಕುಟುಂಬ ಮತ್ತು ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ. ಗಳಿಸಬಹುದಾದ ಮತ್ತು ಮರಳಿ ಪಡೆಯಬಹುದಾದ ಹಣಕ್ಕಿಂತ ಭಿನ್ನವಾಗಿ, ಕಳೆದುಹೋದ ಆರೋಗ್ಯವನ್ನು ಮರಳಿ ಪಡೆಯುವುದು ಕಷ್ಟ. ಆದ್ದರಿಂದ, ಎಲ್ಲರೂ ಆರೋಗ್ಯದತ್ತ ಗಮನಹರಿಸಿ, ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಸೂಕ್ತ ಔಷಧಿ ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ಇದೇ ವೇಳೆ ಮಾತನಾಡಿದ ಆಸ್ಪತ್ರೆಯ ಸಿಬ್ಬಂದಿವರ್ಗದವರು, ನಯನಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಆದಾಗಿನಿಂದಲೂ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸಲಾಗುತ್ತಿದೆ.ನಮ್ಮಲ್ಲಿ ಬಿಪಿಎಲ್ ಕಾರ್ಡ್ , ಯಶಸ್ಬಿನಿ, ರೈಲ್ವೆ, ಇಎಸ್ ಐ ಸೇರಿದಂತೆ ಇನ್ನಿತರ ಎಲ್ಲಾ ರೀತಿಯ ಯೋಜನೆಗಳನ್ನು ಅಂಗೀಕರಿಸಲಾಗುತ್ತದೆ.ಮತ್ತು ಸಿಟಿ , ಎಂಆರ್ ಐ, ಸರ್ಜರಿಗಳು ದಿನದ 24 ಗಂಟೆಯೂ ರೋಗಿಗಳಿಗೆ ಸ್ಪಂದನೆ, ಚಿಕಿತ್ಸೆ ಎಲ್ಲವೂ ಲಭ್ಯವಿದೆ. ಇಂದು ಆಗಮಿಸುವ ಎಲ್ಲ ಜನರಿಗೂ ಉಚಿತವಾಗಿ ತಪಾಸಣೆ ನಡೆಸಿ, ಅಗತ್ಯವಿರುವ ಚಿಕಿತ್ಸೆ ನೀಡಲಾಗುತ್ತದೆ.ಹಾಗೂ ಮಾರ್ಚ್ 31 ರವರೆಗೂ ಉಚಿತ ವೈದ್ಯರ ಸಲಹೆ ಹಾಗೂ ತಪಾಸಣೆ ವಿಸ್ತರಿಸಲಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಈ ಸಂದರ್ಭದಲ್ಲಿ ಯೋಗಾನರಸಿಂಹ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್, ಡಾ. ತೇಜಸ್, ಡಾ.ಶಾಲಿನ ಡಾ.ಪ್ರಕಾಶ್, ಡಾ.ದೇವಾನಂದ್, ಡಾ.ಶಿವಾನಂದ್, ಡಾ.ಅಪೂರ್ವ, ಡಾ.ಪೂರ್ಣಿಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



