Wednesday, March 18, 2026
Google search engine

Homeರಾಜಕೀಯಸಚಿವರು ಮತ್ತು ಅಧಿಕಾರಿಗಳ ಉದಾಸೀನದ ಪ್ರವೃತ್ತಿ ವಿರುದ್ಧ ಸಿಎಂ ಕೆಂಡಾಮಂಡಲ

ಸಚಿವರು ಮತ್ತು ಅಧಿಕಾರಿಗಳ ಉದಾಸೀನದ ಪ್ರವೃತ್ತಿ ವಿರುದ್ಧ ಸಿಎಂ ಕೆಂಡಾಮಂಡಲ

ಬೆಂಗಳೂರು : ರಾಜ್ಯ ವಿಧಾನಸಭೆಯಲ್ಲಿ ಸಚಿವರು ಮತ್ತು ಅಧಿಕಾರಿಗಳ ಉದಾಸೀನದ ಪ್ರವೃತ್ತಿ ವಿರುದ್ಧ ಮುಖ್ಯಮಂತ್ರಿಗಳು ತೀವ್ರವಾಗಿ ಕೆಂಡಾಮಂಡಲಗೊಂಡಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದೆ. ಬಜೆಟ್ ಅಧಿವೇಶನದ 7ನೇ ದಿನವಾದ ಸೋಮವಾರ, ಸ್ಪೀಕರ್ ಯು.ಟಿ. ಖಾದರ್ ಅವರು ಸದನಕ್ಕೆ ಆಗಮಿಸಿದಾಗ ಸಚಿವರು ಮತ್ತು ಅಧಿಕಾರಿಗಳ ಗೈರುಹಾಜರಿ ಕಂಡು ಕೆಂಡಾಮಂಡಲರಾಗಿ ಸಭಾತ್ಯಾಗ ಮಾಡಿದ್ದರು.

ಇನ್ನೂ ಸಭಾಧ್ಯಕ್ಷರೇ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಸಿಎಂ ಸಿದ್ಧರಾಮಯ್ಯ ಅವರಿಗೆ ತೀವ್ರ ಮುಜುಗರಕ್ಕೀಡು ಮಾಡಿದ್ದು, ಈ ಘಟನೆ ಬೆನ್ನಲ್ಲೇ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಹಾಗೂ ಮತ್ತು ಇಲಾಖಾ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಕೇಳುವ ಪ್ರಶ್ನೆಗಳಿಗೆ ಸಕಾಲದಲ್ಲಿ ಉತ್ತರ ನೀಡದ ಇಲಾಖೆಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಅಧಿಕಾರಿಗಳ ವಿರುದ್ಧವಷ್ಟೇ ಅಲ್ಲದೆ, ಮುಖ್ಯಮಂತ್ರಿಗಳು ಅವರು ಶಾಸಕರ ಪ್ರಶ್ನೆಗಳಿಗೆ ಉತ್ತರಿಸದ ಸಚಿವರಿಗೂ ಖಡಕ್ ಪತ್ರ ಬರೆದಿದ್ದು, ಪತ್ರದಲ್ಲಿ 16ನೇ ವಿಧಾನಸಭೆಯ ಮೊದಲ ಅಧಿವೇಶನದಿಂದ ಹಿಡಿದು ಈಗಿನ 9ನೇ ಅಧಿವೇಶನದವರೆಗೆ ಬಾಕಿ ಇರುವ ಪ್ರಶ್ನೆಗಳ ಪಟ್ಟಿಯನ್ನು ಲಗತ್ತಿಸಿರುವ ಅವರು, ಸರ್ಕಾರದ ಗಂಭೀರತೆಯನ್ನು ನೆನಪಿಸಿದ್ದಾರೆ.

ವಿಶೇಷವಾಗಿ ಮಾ.16ರಂದು ನಡೆದ ಸದನದಲ್ಲಿ ಕೇಳಲಾದ 245 ಪ್ರಶ್ನೆಗಳ ಪೈಕಿ ಕೇವಲ 90 ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿರುವುದನ್ನು ಸಿಎಂ ಬೊಟ್ಟು ಮಾಡಿದ್ದು, ಸಚಿವರ ಈ ವಿಳಂಬ ಧೋರಣೆಯು ಶಾಸಕರು ಸದನದಲ್ಲಿ ಸಾರ್ವಜನಿಕ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸಲು ಅಡ್ಡಿಯುಂಟುಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ಬದಲಾಗಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡುವ ವಿಷಯವಾಗಿದೆ. ಶಾಸಕರ ಹಕ್ಕನ್ನು ಕಸಿದುಕೊಳ್ಳುವುದರ ಜೊತೆಗೆ ಸದನದ ಘನತೆಗೂ ಇದರಿಂದ ಚ್ಯುತಿ ಬಂದಿದೆ ಎಂದು ಚಾಟಿ ಬೀಸಿದ್ದಾರೆ. ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸದನದಲ್ಲಿ ಉತ್ತರಿಸಲು ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರಗಳನ್ನು ಇದುವರೆಗೂ ಕಳುಹಿಸದೇ ಇರುವುದು ವಿಧಾನಸಭಾ ಸದಸ್ಯರುಗಳು ಸದನದಲ್ಲಿ ಚರ್ಚಿಸಲು ಅನಾನುಕೂಲತೆಯನ್ನು ಉಂಟು ಮಾಡಿರುತ್ತದೆ.

ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡುವುದರೊಂದಿಗೆ ಶಾಸಕರುಗಳ ಹಕ್ಕಿಗೆ ಮತ್ತು ಸದನದ ಘನತೆಗೆ ಚ್ಯುತಿಯನ್ನುಂಟು ಮಾಡಿರುತ್ತದೆ. ಈ ಸಂಬಂಧ ಇಂದು ನಡೆದ ಸಭೆಯಲ್ಲಿ ಮಾನ್ಯ ಸಭಾಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುತ್ತಾರೆ.

ತಮ್ಮ ಇಲಾಖೆಯ ವತಿಯಿಂದ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಉತ್ತರವನ್ನು ಸಕಾಲದಲ್ಲಿ ವಿಧಾನಮಂಡಲಕ್ಕೆ ಕಳುಹಿಸದೇ ಇರುವ ಬಗ್ಗೆ ಇಲಾಖಾ ಕಾರ್ಯದರ್ಶಿಗಳ ವಿವರಣೆಯನ್ನು ತಕ್ಷಣ ನೀಡಲು ಸೂಚಿಸಲಾಗಿದೆ. ಅಲ್ಲದೆ, ಉತ್ತರ ಕಳುಹಿಸದ ಸಂದರ್ಭದಲ್ಲಿ ಸಂಬಂಧಪಟ್ಟ ಶಾಸಕರಿಗೆ ಪ್ರತ್ಯೇಕ ಪತ್ರವನ್ನು ಕಳುಹಿಸಿ ಹಾಗೂ ಮಾಹಿತಿ ಒದಗಿಸುವ ನಿರ್ಧಿಷ್ಟ ಸಮಯವನ್ನು ತಿಳಿಸಲು ಸಹ ಸೂಚಿಸಿದೆ ಎಂದು ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದ ಬಳಿಕ ಲಿಖಿತ ರೂಪದಲ್ಲಿರುವ ಉತ್ತರಗಳನ್ನು ಮಂಡಿಸಿದ ಗೃಹ ಸಚಿವ ಜಿ.ಪರಮೇಶ್ವರ, ‘230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡಿಸಲಾಗಿದೆ’ ಎಂದಿದ್ದರು. ಅದಕ್ಕೆ ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ನಂತರ, ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಭಾತ್ಯಾಗ ಮಾಡಿದ್ದರು. ಏತನ್ಮಧ್ಯೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಎಂಟು ಪ್ರಮುಖ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಪಶುಸಂಗೋಪನಾ ಇಲಾಖೆಯ ಆರ್.ವಿನೋತ್ ಪ್ರಿಯಾ, ವಸತಿ ಇಲಾಖೆಯ ಮೋಹನ್ ರಾಜ್.ಕೆ.ಪಿ, ಸಾರಿಗೆ ಇಲಾಖೆಯ ಎನ್.ವಿ.ಪ್ರಸಾದ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಆರ್.ಗಿರೀಶ್, ಲೋಕಪಯೋಗಿ ಇಲಾಖೆಯ ಅಮಲಾನ್ ಆದಿತ್ಯ ಬಿಸ್ವಾಸ್ ಹಾಗೂ ಕಂದಾಯ ಇಲಾಖೆಯ ರಾಜೇಂದರ್ ಕುಮಾರ್ ಕಟಾರಿಯಾ ಸೇರಿದಂತೆ ಎಂಟು ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular