ಬೆಂಗಳೂರು : ಅನೇಕ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಈ ದೇಶ ಹಾಗೂ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಸಾಕಷ್ಟು ಕೊಡುಗೆ ನೀಡಿವೆ. ಅನೇಕ ನಾಯಕರನ್ನು ಹುಟ್ಟುಹಾಕಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು.
ಜ್ಯೋತಿ ನಿವಾಸ್ ಶಿಕ್ಷಣ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ‘ಕಾಲೇಜು ದಿವಸ’ ದಲ್ಲಿ ಭಾಗವಹಿಸಿ ಮಾತನಾಡಿದರು. 60 ವರ್ಷಗಳ ಕಾಲ ಅತ್ಯುತ್ತಮ ಸೇವೆಯನ್ನು ಜ್ಯೋತಿ ನಿವಾಸ ಸಂಸ್ಥೆ ಮಾಡಿದೆ. ಈ ಕಾಲೇಜಿನ ಅನೇಕ ವಿದ್ಯಾರ್ಥಿಗಳನ್ನು ನಾನು ಬೇರೆ, ಬೇರೆ ದೇಶಗಳಲ್ಲಿ ಭೇಟಿ ಮಾಡಿದ್ದೇನೆ. ಗ್ಲೋಬಲ್ ಮಟ್ಟದಲ್ಲಿ ಅನೇಕ ಪ್ರತಿಭಾವಂತರನ್ನು ಈ ಸಂಸ್ಥೆ ಕೊಡುಗೆಯಾಗಿ ಕೊಟ್ಟಿದೆ” ಎಂದರು.
ಪ್ರತಿಭೆಯ ಜೊತೆಗೆ ಸಂವಹನ ಮುಖ್ಯವಾದುದು. ನಾನು ರಾಜಕಾರಣಿ ಇರಬಹುದು ಆದರೆ ನಾನು ಶಿಕ್ಷಣ ಪ್ರೇಮಿ. ಅಂತಿಮವಾಗಿ ನಮ್ಮನ್ನೆಲ್ಲಾ ಕಾಪಾಡುವುದೇ ಶಿಕ್ಷಣ. ನೀವು ಉದಾಹರಣೆ ಕೊಡುವುದು ತುಂಬಾ ಸುಲಭ. ಅದೇ ಎಲ್ಲರಿಗೂ ಉದಾಹರಣೆಯಾಗಿ ಬೆಳೆಯುವುದು ಕಠಿಣ ಕೆಲಸ” ಎಂದರು.
“ನಾನು ಕನಕಪುರದ ಸಣ್ಣ ಹಳ್ಳಿಯಿಂದ ಬಂದವನು. ಮೊದಲು ಸೆಂಟ್ ಥಾಮಸ್ ಶಾಲೆಯಲ್ಲಿ ಕಲಿತೆ. ನಂತರ ಎನ್ ಪಿಎಸ್ ಸೇರಿದೆ ಅಲ್ಲಿಂದ ನನ್ನ ಕಿತ್ತು ಹಾಕಿದರು. ಪದವಿ ಓದುವಾಗ ಎಲೆಕ್ಷನ್ ಗೆ ನಿಂತ ಕಾರಣಕ್ಕೆ ಪೂರ್ಣಗೊಳಿಸಲು ಆಗಲಿಲ್ಲ. ಕಡಿಮೆ ವಯಸ್ಸಿಗೆ ಶಾಸಕನಾದೇ. ಸದನದಲ್ಲಿ ಘಟಾನುಘಟಿ ನಾಯಕರ ಮಾತನ್ನು ಕೇಳಿ ನಾನು ಓದಬೇಕು ಎಂದು 46 ನೇ ವಯಸ್ಸಿನಲ್ಲಿ ಪದವಿ ಓದಿದೆ” ಎಂದರು.
ಹೊಸ ಮಹಿಳಾ ನಾಯಕಿಯರು ಬೆಳೆಯಬೇಕು. ಶೇ 33 ರಷ್ಟು ಮೀಸಲಾತಿ ರಾಜಕೀಯ ಕ್ಷೇತ್ರದಲ್ಲಿದೆ. ಸ್ಥಳೀಯ ಸಂಸ್ಥೆಗಳಲ್ಲಿ 50 ರಷ್ಟು ಮೀಸಲಾತಿ ನೀಡಲಾಗಿದೆ. ಭವಿಷ್ಯದಲ್ಲಿ ಈ ಕಾಲೇಜಿನಿಂದ ನಾಯಕಿಯರು ಹೊರಬರಬೇಕು ಎಂದು ಆಶಿಸುತ್ತೇನೆ” ಎಂದರು.
“ಮೂಲವನ್ನು ಮರೆತರೆ ಫಲ ದೊರೆಯುವುದಿಲ್ಲ. ಬೇರು ಗಟ್ಟಿಯಾಗಿರಬೇಕು ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ನಾನು ಡಿಸಿಎಂ ಇರಬಹುದು ಆದರೆ ನನ್ನ ಗುರುಗಳು ಎದುರಾದಾಗ ಅವರಿಗೆ ನಮಸ್ಕರಿಸುತ್ತೇನೆ. “ನಾವೆಲ್ಲರೂ ಒಬ್ಬರಿಗೊಬ್ಬರು ಆಧಾರವಾಗಿದ್ದು ಬೆಳೆಯಬೇಕು. ಪ್ರತಿಭೆಯನ್ನು ಬಚ್ಚಿಟ್ಟುಕೊಳ್ಳಬಾರದು. ಜ್ಞಾನವನ್ನು ಹಂಚಬೇಕು. ಹಂಚಿದಾಗ ಮಾತ್ರ ಪ್ರಗತಿ ಸಾಧ್ಯ” ಎಂದರು.



