ಮಂಡ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರುವ ಮೂಲಕ ತಾವೂ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಟಿ.ಎಸ್. ಛತ್ರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ರಾಜಕಾರಣದ ಹಲವು ವಿಚಾರಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಕ್ ಪ್ರಹಾರ ನಡೆಸಿದರು.
ಸಿದ್ದರಾಮಯ್ಯ ಅವರ ಕುಟುಂಬ ರಾಜಕಾರಣದ ಟೀಕೆಗೆ ಉತ್ತರಿಸಿದ ಅವರು, “ಸಿದ್ದರಾಮಯ್ಯ ಅವರು ಮೊದಲು ತಮ್ಮ ಮೊದಲ ಮಗನನ್ನು ಬೆಳೆಸಲು ನೋಡಿದರು. ಅವರ ಅಕಾಲಿಕ ಮರಣದ ನಂತರ ಎರಡನೇ ಮಗನನ್ನು ರಾಜಕಾರಣಕ್ಕೆ ತಂದಿದ್ದಾರೆ. ವೈದ್ಯರಾಗಿದ್ದವರನ್ನು ರಾಜಕೀಯಕ್ಕೆ ಕರೆತಂದು ವಸೂಲಿಗಾಗಿ ಇಟ್ಟುಕೊಂಡಿದ್ದಾರೆ. ಡಿಸಿಎಂ ಕುಟುಂಬದಲ್ಲಿ ಎಷ್ಟು ಜನ ಅಧಿಕಾರದಲ್ಲಿದ್ದಾರೆ? ಕೇವಲ ನಮ್ಮ ಕುಟುಂಬ ಮಾತ್ರವಲ್ಲ, ಎರಡು-ಮೂರು ಜನ ಶಾಸಕರಿರುವ ಕುಟುಂಬಗಳು ಕಾಂಗ್ರೆಸ್ ನಲ್ಲಿ ಸಾಕಷ್ಟಿವೆ ಎಂದರು.
ದೇವೇಗೌಡರು ನಮ್ಮನ್ನು ವಸೂಲಿ ಮಾಡಲು ರಾಜಕೀಯಕ್ಕೆ ತರಲಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ನಾವು ರಾಜಕೀಯಕ್ಕೆ ಬಂದೆವು. ಜನರೇ ನಮ್ಮನ್ನು ಈ ಸ್ಥಾನಕ್ಕೆ ತಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮಂಡ್ಯದಲ್ಲಿ ಹೊಸ ಟೌನ್ ಶಿಪ್ ನಿರೀಕ್ಷೆ
ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ಮೇ ತಿಂಗಳಲ್ಲಿ ಮಂಡ್ಯದಲ್ಲಿ ಎಆರ್ ಎಐ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸುವ ಗುರಿಯಿದೆ. ಈ ಘಟಕ ಸ್ಥಾಪನೆಯಿಂದ ಮಂಡ್ಯದಲ್ಲಿ ದೊಡ್ಡ ಮಟ್ಟದ ಟೌನ್ ಶಿಪ್ ಬೆಳೆಯಲಿದೆ. ರಾಜ್ಯ ಸರ್ಕಾರ ಯಾವ ಜಾಗವನ್ನು ಅಭಿವೃದ್ಧಿ ಪಡಿಸಿಕೊಡಲಿದೆ ಎಂಬುದನ್ನು ಶೀಘ್ರವೇ ತಿಳಿಸಬೇಕಿದೆ ಎಂದರು.
ಸಿದ್ದರಾಮಯ್ಯ ಅವರು 2028ರವರೆಗೂ ನಾನೇ ಸಿಎಂ ಎನ್ನುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರದ ರುಚಿ ನೋಡಿದ ಮೇಲೆ ಸಿದ್ದರಾಮಯ್ಯ ಅವರು ನಾನೇ ಪರ್ಮನೆಂಟ್ ಸಿಎಂ ಎನ್ನುತ್ತಿದ್ದಾರೆ. 2013ರಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದಿದ್ದರು. ಆದರೆ ಈಗ ಕೊನೆ ಉಸಿರಿರುವವರೆಗೂ ರಾಜಕೀಯ ಮಾಡುತ್ತೇನೆ ಎನ್ನುತ್ತಿದ್ದಾರೆ. ಅವರ ಭವಿಷ್ಯವನ್ನು ಮುಂದಿನ ಚುನಾವಣೆಯಲ್ಲಿ ಜನರೇ ತೀರ್ಮಾನ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಯುದ್ಧದ ಸಂದರ್ಭದಲ್ಲಿ ಕಾಂಗ್ರೆಸ್ ರಾಜಕೀಯ
ಜಾಗತಿಕ ಯುದ್ಧದ ಭೀತಿ ಮತ್ತು ಇಂಧನ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಅವರು, ಬೇರೆ ದೇಶಗಳು ಲಾಕ್ ಡೌನ್ ಪರಿಸ್ಥಿತಿ ತಲುಪಿವೆ. ಆದರೆ ಭಾರತವು ಉತ್ತಮ ಬಾಂಧವ್ಯದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕೇಂದ್ರ ಸರ್ಕಾರ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದರೆ, ನೀವು ಏನು ಮಾಡುತ್ತಿದ್ದೀರಿ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಐಪಿಎಲ್ ಟಿಕೆಟ್ ಬೇಡಿಕೆ : ಶಾಸಕರ ನಡೆ ನಗೆಪಾಟಲು
ಇತ್ತೀಚೆಗೆ ವಿಧಾನಸಭೆಯಲ್ಲಿ ಶಾಸಕರು ಐಪಿಎಲ್ ಟಿಕೆಟ್ ಗಾಗಿ ಬೇಡಿಕೆ ಇಟ್ಟ ವಿಚಾರವನ್ನು ಪ್ರಸ್ತಾಪಿಸಿದ ಅವರು, ಹಿಂದೆ ಶಾಸಕರಿಗೆ ಅಥವಾ ಮಂತ್ರಿಗಳಿಗೆ ಗೌರವಯುತವಾಗಿ ಒಂದು ಅಥವಾ ಎರಡು ಪಾಸ್ ನೀಡಲಾಗುತ್ತಿತ್ತು. ಆದರೆ ಅಸೆಂಬ್ಲಿಯಲ್ಲಿ ನಿಂತು 3-4 ಟಿಕೆಟ್ ಬೇಕು ಎಂದು ಕೇಳಿ ಶಾಸಕರು ನಗೆಪಾಟಲಿಗೀಡಾಗಿದ್ದಾರೆ ಎಂದು ಕುಟುಕಿದರು



