ಮೈಸೂರು: 12ನೇ ಶತಮಾನದಲ್ಲೇ ಜಾತಿ ಪದ್ಧತಿ ಮತ್ತು ಮೂಢನಂಬಿಕೆಗಳ ವಿರುದ್ಧ ಧ್ವನಿಯೆತ್ತಿ ಹೊಸ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರನ್ನು ನಾವು ಸದಾ ಸ್ಮರಿಸಬೇಕು.
ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿದ ಅವರು, ನಾವೆಲ್ಲರೂ ಮೊದಲು ಮನುಷ್ಯರಾಗಿ ಬದುಕಬೇಕು ಎಂಬ ಉದಾತ್ತ ಸಂದೇಶ ನೀಡಿದರು. ಅವರ ಸಂದೇಶಗಳು ನಮ್ಮ ಜೀವನದ ದಾರಿದೀಪವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ವೈದಿಕ ಧರ್ಮದಲ್ಲಿದ್ದ ಚತುರ್ವರ್ಣ ಪದ್ಧತಿಯನ್ನು ವಿರೋಧಿಸಿ, ಎಲ್ಲರನ್ನೂ ಸಮಾನವಾಗಿ ಕಾಣುವ ‘ಶರಣ ಸಂಸ್ಕೃತಿ’ಯನ್ನು ಬಸವಣ್ಣ ನವರು ಪರಿಚಯಿಸಿದರು. ‘ಕಾಯಕ’ ಮತ್ತು ‘ದಾಸೋಹ’ ಪರಿಕಲ್ಪನೆಗಳು ಬಸವಣ್ಣನವರ ಅದ್ಭುತವಾದ ಕೊಡುಗೆಗಳಾಗಿವೆ.ಕೆಲಸದಲ್ಲಿ ಮೇಲು-ಕೀಳು ಎಂಬ ಭೇದವಿಲ್ಲ.ಎಲ್ಲಾ ವೃತ್ತಿಗಳೂ ಪವಿತ್ರ ಹಾಗೂ ಸಮಾನವಾದುವು ಎಂದು ಅವರು ಸಾರಿದರು.
ಬಸವಣ್ಣನವರ ಆಶಯಗಳನ್ನೇ ಮುಂದುವರಿಸಿದ ಡಾ. ಬಿ. ಆರ್. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ವಿರೋಧಿಸಿದರು. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಸ್ವಾವಲಂಬಿಯಾದಾಗ ಮಾತ್ರ ನಮಗೆ ದೊರೆತ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಸಮ ಸಮಾಜದ ಕನಸು ಕಂಡಿದ್ದರು. ಇದನ್ನು ಸಾಕಾರಗೊಳಿಸಲು ನಾವು ವೈಜ್ಞಾನಿಕ ಶಿಕ್ಷಣ ಪಡೆಯಬೇಕು ಹಾಗೂ ಮೂಢನಂಬಿಕೆಗಳನ್ನು ತ್ಯಜಿಸಿ ಸುಸಂಸ್ಕೃತ ವ್ಯಕ್ತಿಗಳಾಗಬೇಕು ಎಂದು ಹೇಳಿದರು.
ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಬಸವಣ್ಣ ನವರು ವಚನಗಳನ್ನು ರಚಿಸಿ, ಜ್ಞಾನವು ಎಲ್ಲರಿಗೂ ತಲುಪುವಂತೆ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.
ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಅವರು ತಿಳಿಸಿದರು.
ಬಸವ ಭವನ ನಿರ್ಮಾಣಕ್ಕೆ 5 ಕೋಟಿ ರೂ ಅನುದಾನ ನೀಡಲಾಗುವುದು ಎಂದು ಕಾರ್ಯಕ್ರಮದಲ್ಲಿ ಘೋಷಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ ಅವರು ಮಾತನಾಡಿ ಬಸವ ಜಯಂತಿ ಕಾರ್ಯಕ್ರಮವು ಕಲ್ಯಾಣದಲ್ಲಿ ಬಸವನಣ್ಣ ಅವರು ನಡೆಸಿದ ಎಲ್ಲಾ ಕ್ರಾಂತಿಯ ವಿಚಾರ ಧಾರೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಒಂದು ಪ್ರಯತ್ನವಾಗಿದೆ.
ಈ ಕಾರ್ಯಕ್ರಮದ ಮೂಲಕ ಬಸವಣ್ಣ ನವರ ವಿಚಾರಗಳು ಎಲ್ಲರ ಮನೆ ಬಾಗಿಲಿಗೆ ತಲುಪಬೇಕು ಎಂದು ಹೇಳಿದರು.
ಬಸವಣ್ಣ ಅವರು ತಮ್ಮ ಎಂಟನೇ ವಯಸ್ಸಿನಲ್ಲಿ ಲಿಂಗ ತಾರತಮ್ಯದ ಬಗ್ಗೆ ಅವರು ತಮ್ಮ ಕುಟುಂಬದವರ ವಿರುದ್ಧವೇ ನಿಂತರು. ಲಿಂಗ ಧಾರಣೆ ಎಲ್ಲರೂ ಮಾಡಿ ದೇಹವೇ ದೇಗುಲ, ಕಾಯಕವೇ ಕೈಲಾಸ ಎಂದು ಸಾರಿದರು. ತೆರಿಗೆ ಹಣವನ್ನು ಜನರ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂಬ ನಿಲುವು ಹೊಂದಿದ್ದರು, ಸಮ ಸಮಾಜದ ನಿರ್ಮಾಣ ಬಗೆಗಿನ ಅವರ ನಿಲುವು ಅಪಾರವಾಗಿದೆ ಎಂದು ತಿಳಿಸಿದರು.
ಬಸವಣ್ಣ ಅವರು 12 ನೇ ಶತಮಾನದಲ್ಲಿ ವರ್ಣಾಶ್ರಮವನ್ನು ವಿರೋಧಿಸಿ ಅಂತರ್ಜಾತಿಯ ವಿವಾಹವನ್ನು ಪ್ರೋತ್ಸಾಹಿಸಿದರು. ಸಮಾಜದಲ್ಲಿ ಬುದ್ಧರ ನಂತರ ಸಮ ಸಮಾಜ ನಿರ್ಮಾಣದ ಬಗ್ಗೆ ಜನಸಮಾನ್ಯರಿಗೆ ವಚನಗಳ ಮೂಲಕ ತಿಳಿಸಿದ ಮಹಾನ್ ವ್ಯಕ್ತಿ ಬಸವಣ್ಣನವರು ಎಂದು ಹೇಳಿದರು.
ಬಸವಣ್ಣ ಅವರು ಒಬ್ಬ ಸಾಂಸ್ಕೃತಿಕ ನಾಯಕ ಬಸವಣ್ಣ ನವರ ಅದ್ಬುತವಾದ ಕಲ್ಪನೆ ಎಂದರೆ ಅವರ ಅನುಭವ ಮಂಟಪದವಾಗಿದೆ. ಇಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸ್ಥಾಪನೆಯನ್ನು ಮಾಡಲಾಯಿತು.ದೇಗುಲದಲ್ಲಿ ದೇವರನ್ನು ಕಾಣುವ ಬದಲು ಮನದಲ್ಲಿ ಆತ್ಮಲಿಂಗವನ್ನು ಪೂಜಿಸಬೇಕು ಎಂದು ಲೋಕಕ್ಕೆ ಸಾರಿದ ಮಹಾನ್ ವ್ಯಕ್ತಿ ಬಸವಣ್ಣ ನವರು ಎಂದು ಬಣ್ಣಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ಅವರು ದೊಡ್ಡ ಪ್ರಜಾಪ್ರಭುತ್ವದ ಮಹಾನ್ ಹೋರಾಟಗಾರರು. ಅಂತಹ ಪ್ರಜಾಪ್ರಭುತ್ವಕ್ಕೆ ಬುನಾದಿ ಆದವರು ಬಸವಣ್ಣನವರು.ಕತ್ತಲಿನಿಂದ ಬೆಳಕಿಗೆ ನಡೆಸುವ ಬಸವ ಜಯಂತಿಯನ್ನು ಆಚರಿಸುತ್ತಿರುವುದು ನಮಗೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.
ಶಾಸಕರಾದ ಜಿ. ಟಿ ದೇವೇಗೌಡ ಅವರು ಮಾತನಾಡಿ ಬಸವಣ್ಣನವರು ಮಾನವ ಘನತೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದವರು. ಜಾತಿ ಭೇದವನ್ನು ಕಿತ್ತೊಗೆದು ಸರ್ವ ಸಮಾಜಕ್ಕೂ ಸಮಾನವಾದ ಸಮಾಜವನ್ನು ನಿರ್ಮಾಣ ಮಾಡಿ ಕಲ್ಯಾಣ ರಾಜ್ಯವನ್ನು ಸ್ಥಾಪಿಸಿದವರು ಎಂದು ಹೇಳಿದರು.
ದೇಹವನ್ನೇ ದೇಗುಲ ಮಾಡಿ ಅಂಗೈ ಮೇಲೆ ಇಷ್ಟಲಿಂಗ ಇರಿಸಿ ಜೀವಾತ್ಮನು, ಪರಮಾತ್ಮನು ಕೂಡುವ ಸ್ಥಳವನ್ನು ಸಂಗಮ ಸ್ಥಳವನ್ನಾಗಿ ಮಾಡಿದರು. ಮಡಿ ಮೈಲಿಗೆ ಗಳಂತಹ ಮೌಡ್ಯತೆಯನ್ನು ಒಡೆದು ಹಾಕಿ ಇಷ್ಟ ಲಿಂಗ ಪೂಜೆಯನ್ನು ಸಮಾಜಕ್ಕೆ ಸಾರಿದವರು, ಬಸವೇಶ್ವರ ದೇವರು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವರಾಜ್ ತಂಗಡಗಿ ಅವರು ಮಾತನಾಡಿ ಬಸವಣ್ಣನವರು ಪ್ರಜಾಪ್ರಭುತ್ವದ ಅಡಿಪಾಯವನ್ನು ಹಾಕಿಕೊಟ್ಟ ಮಹಾನ್ ಕ್ರಾಂತಿಕಾರಿ ಮತ್ತು ಮಾನವ ಸಮಾನತೆಯ ಹರಿಕಾರ ಅವರ ತತ್ವಗಳನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಬಸವಣ್ಣನವರನ್ನು ರಾಜ್ಯದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಲು ಮತ್ತು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಸಣ್ಣ ಮಟ್ಟದಲ್ಲಿ ನಡೆಯುತ್ತಿದ್ದ ಬಸವ ಜಯಂತಿಯನ್ನು ರಾಜ್ಯಮಟ್ಟದ ಕಾರ್ಯಕ್ರಮವನ್ನಾಗಿ ಪರಿವರ್ತಿಸಿ, ಅದಕ್ಕೆ ವೈಭವವನ್ನು ನೀಡಲಾಗುತ್ತಿದೆ. ಮೊದಲಿಗೆ ವಿಧಾನ ಸೌಧದಲ್ಲಿ, ನಂತರ ಕೂಡಲಸಂಗಮದಲ್ಲಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ
ಈ ಬಾರಿ ಮೈಸೂರಿನಲ್ಲಿ ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಬಸವಣ್ಣನವರ ಬಗ್ಗೆ ಕೇವಲ ಭಾಷಣ ಮಾಡುವುದು ಸುಲಭ, ಆದರೆ ಅವರನ್ನು ಆಡಳಿತದಲ್ಲಿ ಮತ್ತು ನೈಜ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ತಮ್ಮ ಸರ್ಕಾರ ಕೇವಲ ಭಾಷಣಕ್ಕೆ ಸೀಮಿತವಾಗದೆ, ಕಾರ್ಯರೂಪಕ್ಕೆ ತರುವ ಕೆಲಸವನ್ನು ಮಾಡುತ್ತಿದೆ ಎಂದರು.
ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಯವರ ಅವರು ಮಾತಾನಾಡಿ ಕಳೆದ 29 ವರ್ಷಗಳಿಂದ ಮೈಸೂರಿನಲ್ಲಿ ಎಲ್ಲಾ ಸಂಘ-ಸಂಸ್ಥೆಗಳು ಒಗ್ಗೂಡಿ ಬಸವ ಜಯಂತಿಯನ್ನು ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ.ಇಂತಹ ಒಕ್ಕೂಟ ವ್ಯವಸ್ಥೆಯು ರಾಜ್ಯಕ್ಕೇ ಮಾದರಿಯಾಗಿದೆ ಎಂದು ಶ್ಲಾಘಿಸಿದರು..
ಸಾಮಾಜಿಕ ಸಮಾನತೆಯ ಸಂದೇಶವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ಜಾತಿ, ಮತ, ಪಂಥಗಳನ್ನು ಮೀರಿ, ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ಅವರ ತತ್ವಾದರ್ಶಗಳಾದ ಸಮಾನತೆ ಮತ್ತು ಅಸ್ಪೃಶ್ಯತೆ ನಿವಾರಣೆಯಂತಹ ವಿಚಾರಗಳು ಇಂದಿನ ದಿನಮಾನಗಳಿಗೂ ಅತ್ಯಂತ ಪ್ರಸ್ತುತ ಎಂದು ಹೇಳಿದರು.
ಮಾನವತಾವಾದದ ಪ್ರತಿಪಾದನೆ ಅಂತಹ “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಬಸವಣ್ಣನವರ ನುಡಿಯಂತೆ, ಜಗತ್ತಿನಲ್ಲಿ ಎಲ್ಲರೂ ಸಮಾನರು. ಭಗವಂತನ ದೃಷ್ಟಿಯಲ್ಲಿ ಯಾರೂ ಮೇಲಲ್ಲ, ಕೀಳಲ್ಲ ಎಂಬ ಸಮಾನತೆಯ ಸಂದೇಶವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಸವಣ್ಣನವರು ಪ್ರತಿಪಾದಿಸಿದ ವೈಚಾರಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಸಮಾಜಿಕ ನ್ಯಾಯದ ಕನಸಿನ ಕೂಸು
ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಜಾತಿ ತಾರತಮ್ಯವಿಲ್ಲದೇ, ಬಡವರು ಹಾಗೂ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ರೂಪಿಸಲಾಗಿದೆ. ಗ್ಯಾರಂಟಿ ಯೋಜನೆಗಳು ವಿಶ್ವ ಗುರು ಬಸವಣ್ಣ ನವರು ನೀಡಿದ ಸಮಾಜಿಕ ನ್ಯಾಯದ ಕನಸಿನ ಕೂಸು ಎಂದು 2025-26 ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರ ಪುರಸ್ಕೃತರಾದ ಸಿದ್ದರಾಮ ಶರಣರು ಬೆಲ್ದಾಳ ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ, ಬಸವಣ್ಣ ನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಅನಾವಣಗೊಳಿಸಬೇಕು ಹಾಗೂ ಅನುಭವ ಮಂಟಪದ ಪುನಶ್ಚೇತನಕ್ಕೆ ಯೋಜನೆ ರೂಪಿಸಿ ಅನೇಕ ಅನುದಾನ ಬಿಡುಗಡೆ ಮಾಡಿದರು ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಶೇಠ್, ಕೆ. ಹರೀಶ್ ಗೌಡ, ವಿಜಯಾನಂದ ಕಾಶ್ಯಪ್ ನವರ್, ವಿಧಾನ ಪರಿಷತ್ ಶಾಸಕರಾದ ಸಿ.ಎನ್ ಮಂಜೇಗೌಡ, ಡಾ: ಡಿ ತಿಮ್ಮಯ್ಯ, ಡಾ: ಯತೀಂದ್ರ ಸಿದ್ದರಾಮಯ್ಯ, ಶಿವಕುಮಾರ್ ಕೆ, ಲೀಕಸಭಾ ಸದಸ್ಯ ಸುನೀಲ್ ಬೋಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ: ಪುಷ್ಪಾ ಅಮರನಾಥ್, ಕರ್ನಾಟಕ ಬೋವಿ ನಿಗಮದ ಅಧ್ಯಕ್ಷ ರಾಮಪ್ಪ, ಜಿಲ್ಲಾಧಿಕಾರಿ ಲಕ್ಷ್ಮಿ ಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ: ಶಿವರಾಜು ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮಂಜುನಾಥ್ ಸ್ವಾಮಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು .



