ಉತ್ತರಾಖಂಡ: ಪವಿತ್ರ ಚಾರ್ ಧಾಮ್ ಯಾತ್ರೆ ಇಂದಿನಿಂದ (ಬುಧವಾರ, ಏಪ್ರಿಲ್ 22) ಅಧಿಕೃತವಾಗಿ ಪ್ರಾರಂಭವಾಗಿದೆ. ಭಕ್ತರ ದರ್ಶನಕ್ಕಾಗಿ ಕೇದಾರನಾಥ ದೇವಾಲಯದ ದ್ವಾರಗಳನ್ನು ಇಂದು ಬೆಳಗ್ಗೆ ತೆರೆಯಲಾಗಿದೆ.
ಸುದೀರ್ಘ ಆರು ತಿಂಗಳ ಕಾದ ಬಳಿಕ, ವೈದಿಕ ಮಂತ್ರಘೋಷಗಳೊಂದಿಗೆ ಕೇದಾರನಾಥನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉಪಸ್ಥಿತರಿದ್ದರು. ಭಾರತ ಸೇರಿದಂತೆ ವಿಶ್ವದ ಮೂಲೆ ಮೂಲೆಗಳಿಂದ ಬಂದ ಸಾವಿರಾರು ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು.
ಪವಿತ್ರ ಚಾರ್ ಧಾಮ್ ಯಾತ್ರೆಗೆ ಆಗಮಿಸುವ ಎಲ್ಲಾ ಭಕ್ತರಿಗೆ ಆತ್ಮೀಯ ಸ್ವಾಗತ. ಬಾಬಾ ಕೇದಾರನಾಥ ಎಲ್ಲರಿಗೂ ಸುಖಕರ ಯಾತ್ರೆಯನ್ನು ಕರುಣಿಸಲಿ ಎಂದು ಉತ್ತರಾ ಖಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ.
ಚಾರ್ ಧಾಮ್ ಯಾತ್ರೆಯು ಭಾರತದ ಐಕ್ಯತೆ ಮತ್ತು ಶ್ರೀಮಂತ ಸಂಪ್ರದಾಯದ ಪ್ರತೀಕ. ಭಕ್ತರ ಯಾತ್ರೆ ಸುರಕ್ಷಿತವಾಗಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಯಾತ್ರೆಯ ವಿಶೇಷತೆಗಳು:
ಈ ವರ್ಷ ಕೇದಾರನಾಥ ದರ್ಶನಕ್ಕಾಗಿ ಈಗಾಗಲೇ 4.50 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಒಟ್ಟಾರೆ ಚಾರ್ ಧಾಮ್ ಯಾತ್ರೆಗೆ 14.50 ಲಕ್ಷಕ್ಕೂ ಅಧಿಕ ಮಂದಿ ಹೆಸರು ದಾಖಲಿಸಿದ್ದಾರೆ. ಇನ್ನೂ ಆನ್‌ಲೈನ್ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಯಾತ್ರೆಗೆ ಅನುಮತಿ ನೀಡಲಾಗುತ್ತಿದ್ದು, ಹೆಲಿಕಾಪ್ಟರ್ ಬುಕಿಂಗ್ ಮತ್ತು ಟ್ರೆಕ್ಕಿಂಗ್ ನಿಯಮಗಳ ವಿವರಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.



