ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್ನಲ್ಲಿ ದೊಡ್ಡ ಹಿನ್ನಡೆಯಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವರಿಗೆ ಸೇರಿದ ಮೈಸೂರಿನ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ನ ವಿಭಾಗೀಯ ಪೀಠವು ಈಗ ಎತ್ತಿಹಿಡಿದಿದೆ.
ಈ ಮೂಲಕ ಮುಡಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ಇನ್ನೂ ಮುಡಾ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಾನೂನು ಪ್ರಕ್ರಿಯೆಯಲ್ಲಿನ ವಿಪರೀತ ವಿಳಂಬವನ್ನು ನ್ಯಾಯಪೀಠವು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಏಕಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಡಾ ಸುಮಾರು 460ಕ್ಕೂ ಹೆಚ್ಚು ದಿನಗಳ ಕಾಲ ವಿಳಂಬ ಮಾಡಿತ್ತು.
ಈ ವಿಳಂಬಕ್ಕೆ ಮುಡಾ ನೀಡಿದ ವಿವರಣೆಗಳು ಅತ್ಯಂತ ಅಸ್ಪಷ್ಟವಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ ಕಾನೂನು ಮಿತಿಗಳ ಕಾಯಿದೆಯ (ಲಿಮಿಟೇಷನ್ ಆಕ್ಟ್) ಅಡಿಯಲ್ಲಿ ದಾವೆಗಳಿಗೆ ಕಾಲಮಿತಿಯ ಒಳಗೆ ಒಂದು ಅಂತಿಮ ರೂಪ ನೀಡಬೇಕಿರುತ್ತದೆ. ಆದರೆ, ಯಾವುದೇ ಸೂಕ್ತ ಕಾರಣಗಳಿಲ್ಲದೆ ಇಂತಹ ದೀರ್ಘಕಾಲದ ವಿಳಂಬವನ್ನು ಪುರಸ್ಕರಿಸುವುದು ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಮುಡಾ ಆಯುಕ್ತರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ವಿಳಂಬಕ್ಕೆ ಯಾವುದೇ ಸಮಂಜಸವಾದ ಸಮರ್ಥನೆ ಇಲ್ಲ. ಒಂದು ಶಾಸನಬದ್ಧ ಪ್ರಾಧಿಕಾರವಾಗಿ ಮುಡಾ ಇಷ್ಟು ಬೇಜವಾಬ್ದಾರಿಯಾಗಿ ವರ್ತಿಸಿರುವುದು ಸರಿ ಎನಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ನ್ಯಾಯಾಲಯವು ಮೃದು ಧೋರಣೆ ತಳೆದರೆ, ಅದು ಪ್ರತಿವಾದಿಗಳಿಗೆ ಮಾಡುವ ದೊಡ್ಡ ಅನ್ಯಾಯವಾಗಲಿದೆ ಎಂದು ನ್ಯಾಯಪೀಠ ಎಚ್ಚರಿಸಿದೆ. ತಮ್ಮ ಹಕ್ಕುಗಳ ಬಗ್ಗೆ ಕನಿಷ್ಠ ಶ್ರದ್ಧೆಯಿಲ್ಲದವರ ಪರವಾಗಿ ಆದೇಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಮುಡಾದ ಅರ್ಜಿಯನ್ನು ವಜಾ ಮಾಡಿದೆ.
ಏನಿದು ಪ್ರಕರಣ ಎಂಬುದನ್ನು ನೋಡುವುದಾದರೇ..
ಈ ವಿವಾದವು 1992 ರಿಂದ ಆರಂಭವಾದದ್ದು, ಮೈಸೂರಿನ ಆಲನಹಳ್ಳಿ ಗ್ರಾಮದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಸಿ.ನಾಗರಾಜು ಸೇರಿದಂತೆ ಇತರರಿಗೆ ಸೇರಿದ ವಿವಿಧ ಸರ್ವೇ ನಂಬರ್ಗಳ ಜಮೀನುಗಳನ್ನು ‘ಆಲನಹಳ್ಳಿ 2ನೇ ಹಂತದ ಬಡಾವಣೆ’ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಮುಡಾ ಮುಂದಾಗಿತ್ತು.
ಈ ಸಂಬಂಧ 1992ರ ಜೂನ್ 25ರಂದು ಪ್ರಾಥಮಿಕ ಅಧಿಸೂಚನೆ ಮತ್ತು 1996ರ ಮಾರ್ಚ್ 18ರಂದು ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಭೂಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ಏಕಸದಸ್ಯ ಪೀಠವು, 2022ರ ಆಗಸ್ಟ್ 1ರಂದು ಮುಡಾ ಹೊರಡಿಸಿದ್ದ ಎರಡೂ ಅಧಿಸೂಚನೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಮುಡಾ ವಿಭಾಗೀಯ ಪೀಠಕ್ಕೆ ತಡವಾಗಿ ಮೇಲ್ಮನವಿ ಸಲ್ಲಿಸಿತ್ತು, ಅದು ಈಗ ವಿಫಲವಾಗಿದೆ. ಈ ತೀರ್ಪಿನಿಂದಾಗಿ ದಶಕಗಳ ಕಾಲದ ಕಾನೂನು ಹೋರಾಟದಲ್ಲಿ ಭೂಮಾಲೀಕರಿಗೆ ಜಯ ಸಿಕ್ಕಂತಾಗಿದೆ.



