ನವದೆಹಲಿ: ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ ಸೇರಿದಂತೆ 7 ರಾಜ್ಯಸಭಾ ಸಂಸದರು, ಎಎಪಿ ಪಕ್ಷವನ್ನ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್ ಸೇರಿದಂತೆ 7 ರಾಜ್ಯಸಭಾ ಸಂಸದರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ರಾಘವ್ ಚಡ್ಡಾ, ರಾಜ್ಯಸಭಾ ಸದಸ್ಯರ ಪೈಕಿ 2/3 ಸದಸ್ಯರು ಬೆಂಬಲ ನೀಡಿದ್ದಾರೆ. ಇದರ ಜೊತೆಗೆ ಬಿಜೆಪಿಗೆ ಬೆಂಬಲಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯಸಭೆಯಲ್ಲಿ ಎಎಪಿಗೆ ಸೇರಿದ 2/3 ಸದಸ್ಯರಾದ ನಾವು ಭಾರತದ ಸಂವಿಧಾನದ ನಿಬಂಧನೆಗಳನ್ನು ಚಲಾಯಿಸಲು ಮತ್ತು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ ಎಂದ ರಾಘವ್ ಚಡ್ಡಾ, ನಾನು ನನ್ನ ರಕ್ತ ಮತ್ತು ಬೆವರಿನಿಂದ ಪೋಷಿಸಿ, ನನ್ನ ಯೌವನದ 15 ವರ್ಷಗಳನ್ನು ನೀಡಿದೇನೆ. ಆದರೆ ಎಎಪಿ ತನ್ನ ತತ್ವಗಳು, ಮೌಲ್ಯಗಳು ಮತ್ತು ಮೂಲ ನೈತಿಕತೆಗಳಿಂದ ವಿಮುಖವಾಗಿದೆ. ಈಗ ಈ ಪಕ್ಷವು ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಅದರ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ವಿರುದ್ದ ಆರೋಪಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ, ನಾನು ತಪ್ಪು ಪಕ್ಷದಲ್ಲಿ ಕೆಲಸ ಮಾಡುವ ಸರಿಯಾದ ವ್ಯಕ್ತಿ ಎಂದು ನನಗೆ ಅನಿಸುತ್ತಿದೆ. ಆದ್ದರಿಂದ, ಇಂದು ನಾನು ಎಎಪಿಯಿಂದ ದೂರ ಸರಿಯುತ್ತಿದ್ದೇನೆ ಮತ್ತು ಸಾರ್ವಜನಿಕರಿಗೆ ಹತ್ತಿರವಾಗುತ್ತಿದ್ದೇನೆ ಎಂದು ಘೋಷಿಸಿದ್ದಾರೆ.



