ನವದೆಹಲಿ : ಅಮೆರಿಕದ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್’ ಕಾರ್ಯಕ್ರಮದಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಘಟನೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ಸ್ಥಳದಲ್ಲಿದ್ದರು. ಅದೃಷ್ಟವಶಾತ್ ಟ್ರಂಪ್ ಮತ್ತು ಇತರ ಅಧಿಕಾರಿಗಳು ಸುರಕ್ಷಿತವಾಗಿದ್ದು, ಅವರನ್ನು ತಕ್ಷಣವೇ ಸ್ಥಳದಿಂದ ಹೊರಕ್ಕೆ ಕರೆತರಲಾಗಿದೆ.
ಪ್ರಧಾನಿ ಮೋದಿ ಪ್ರತಿಕ್ರಿಯೆ
ಈ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾ ‘X’ ನಲ್ಲಿ ಪೋಸ್ಟ್ ಮಾಡಿರುವ ಅವರು “ವಾಷಿಂಗ್ಟನ್ ಡಿಸಿಯ ಹೋಟೆಲ್‌ನಲ್ಲಿ ನಡೆದ ಭದ್ರತಾ ಲೋಪದ ನಂತರ ಅಧ್ಯಕ್ಷ ಟ್ರಂಪ್, ಪ್ರಥಮ ಮಹಿಳೆ ಮತ್ತು ಉಪಾಧ್ಯಕ್ಷರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಸಮಾಧಾನವಾಯಿತು. ಅವರ ಕ್ಷೇಮಕ್ಕಾಗಿ ನಾನು ಹಾರೈಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಯಾವುದೇ ಸ್ಥಾನವಿಲ್ಲ ಮತ್ತು ಇದನ್ನು ಸ್ಪಷ್ಟವಾಗಿ ಖಂಡಿಸಬೇಕು,” ಎಂದು ತಿಳಿಸಿದ್ದಾರೆ.
ಘಟನೆಯ ವಿವರ:
ಅಮೆರಿಕದ ಮಾಧ್ಯಮಗಳ ವರದಿಯ ಪ್ರಕಾರ, ಈ ದಾಳಿಯಲ್ಲಿ ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಯೊಬ್ಬರಿಗೆ ಗುಂಡು ತಗುಲಿದೆ. ಗುಂಡಿನ ದಾಳಿ ನಡೆಸಿದವ ಕ್ಯಾಲಿಫೋರ್ನಿಯಾದ 30 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಗುಂಡು ಅಧಿಕಾರಿಯ ಪ್ರೊಟೆಕ್ಟಿವ್ ಗೇರ್‌ಗೆ (ಬುಲೆಟ್ ಪ್ರೂಫ್ ಕವಚ) ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಭದ್ರತಾ ಸಿಬ್ಬಂದಿ ದಾಳಿಕೋರನನ್ನು ಹೊಡೆದುರುಳಿಸಿದಾಗ ಆತನ ಬಳಿ ರೈಫಲ್ ಮತ್ತು ಮ್ಯಾಗಜಿನ್ ಪತ್ತೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವೈರಲ್ ಆದ ವಿಡಿಯೋ
ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಟ್ರಂಪ್ ಅವರು ಮಾತನಾಡುತ್ತಿದ್ದಾಗ ಏಕಾಏಕಿ ಗುಂಡಿನ ಸದ್ದು ಕೇಳಿಸಿದೆ. ಕೂಡಲೇ ಭದ್ರತಾ ಸಿಬ್ಬಂದಿ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಅವರನ್ನು ಸುತ್ತುವರಿದು ವೇದಿಕೆಯಿಂದ ಕೆಳಗಿಳಿಸಿದ್ದಾರೆ. ಸಭೆಯಲ್ಲಿದ್ದ ಜನರು ಭಯದಿಂದ ಟೇಬಲ್‌ಗಳ ಕೆಳಗೆ ಅವಿತಿರುವ ದೃಶ್ಯಗಳು ಕಂಡುಬಂದಿವೆ.
ಟ್ರಂಪ್ ಮೇಲೆ ಇದು ಮೊದಲ ದಾಳಿಯಲ್ಲ
ಡೊನಾಲ್ಡ್ ಟ್ರಂಪ್ ಅವರ ಮೇಲೆ ಈ ಹಿಂದೆಯೂ ಮಾರಣಾಂತಿಕ ದಾಳಿಗಳು ನಡೆದಿವೆ. ಜುಲೈ 2024, ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಲಾಗಿತ್ತು. ಅಂದು ಗುಂಡು ಅವರ ಕಿವಿಯ ಪಕ್ಕದಲ್ಲಿ ಹಾದುಹೋಗಿತ್ತು. ಸೆಪ್ಟೆಂಬರ್ 2024, ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಗಾಲ್ಫ್ ಕೋರ್ಸ್‌ನಲ್ಲಿ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಲಾಗಿತ್ತು. ಈ ಪ್ರಕರಣದಲ್ಲಿ ರಯಾನ್ ವೆಸ್ಲಿ ರೌತ್ ಎಂಬಾತನನ್ನು ಬಂಧಿಸಲಾಗಿತ್ತು.
ಪ್ರಸ್ತುತ ವಾಷಿಂಗ್ಟನ್ ನಲ್ಲಿ ನಡೆದ ಈ ಘಟನೆಯು ಅಮೆರಿಕ ಅಧ್ಯಕ್ಷರ ಭದ್ರತೆಯ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸಿದೆ.



