ಮೈಸೂರು : ತಮ್ಮ ಬಗ್ಗೆ ಮಾತನಾಡಿದ್ದ ನಟ ಚೇತನ್ ಅಹಿಂಸ ಬಗ್ಗೆ ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿ ಕಾರಿದರು. ಧಮ್ ಇದ್ದರೆ ಬಂದು ಅವರಿಗೆ ಚುನಾವಣೆಗೆ ನಿಲ್ಲಲು ಹೇಳಿ. ಅವರಂತೆ ಮನೆಯಲ್ಲಿ ಕುಳಿತು ಟ್ವಿಟ್ಟರ್ನಲ್ಲಿ ನಾನೂ ಸಾವಿರ ಬರೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರನಟ ಡಾ. ರಾಜ್ಕುಮಾರ್ ಅವರ ಬಗ್ಗೆ ಚೇತನ್ ಮಾತನಾಡಿದ್ದನ್ನು ನಿಖಿಲ್ ಇತ್ತೀಚೆಗೆ ಖಂಡಿಸಿದ್ದರು. ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡಲು ನಟ ಚೇತನ್ ಅವರಿಗೆ ಯೋಗ್ಯತೆ ಇಲ್ಲ. ಅವರೊಬ್ಬ ಪ್ರಚಾರಪ್ರಿಯ ಎಂದು ದೂರಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಚೇತನ್ ಅಹಿಂಸಾ, ನಿಖಿಲ್ ಕುಮಾರಸ್ವಾಮಿ ಮತ್ತು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದ್ದರು. ಚೇತನ್ ಅಹಿಂಸಾ ಅವರು ನಿಖಿಲ್ ಕುಮಾರಸ್ವಾಮಿಯವರಿಗೆ ಮಾತನಾಡಲು ಏನು ಅರ್ಹತೆ ಇದೆ, ಅವರು ಮೂರು ಬಾರಿ ಸೋತಿದ್ದಾರೆ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಇರಲಿ, ಅವರ ಬಗ್ಗೆ ಬೇಡ, ಒಂದು ವಿಚಾರವನ್ನು ನಾನು ಚರ್ಚೆ ಮಾಡಲು ಬಯಸುತ್ತೇನೆ. ಡಾ.ರಾಜ್ ಕುಮಾರ್ ಅವರನ್ನು ಇಡೀ ಕನ್ನಡ ನಾಡಿನ ಜನತೆ ಅಣ್ಣಾವ್ರು ಅಂತ ಹೇಳಿದ್ದು ಬಹುಶಃ ಮೊದಲ ಅಣ್ಣನವರ ಸ್ಥಾನ ಕೊಟ್ಟಿದ್ದು ಡಾ.ರಾಜ್ ಕುಮಾರ್ ಅವರಿಗೆ. ಆ ಸ್ಥಾನವನ್ನು ಯಾರಿಗೂ ನೀಡಿರಲಿಕ್ಕಿಲ್ಲ, ಅವರು ಯಾವ ರೀತಿ ಸಮಾಜಕ್ಕೆ ಒಂದು ತಿದ್ದಿ ಬುದ್ಧಿ ಹೇಳತಕ್ಕಂತಹ ಅನೇಕ ಕಥೆಗಳನ್ನು ಆಯ್ಕೆ ಮಾಡಿ ಆ ಮೂಲಕ ಸಮಾಜವನ್ನು ಪರಿವರ್ತನೆ ಮಾಡತಕ್ಕಂತಹ ಮೇರು ನಟ ಅಂತ ಹೇಳಿದ್ರೆ ಬಹುಶಃ ತಪ್ಪಾಗಲಿಕ್ಕಿಲ್ಲ, ಅಂತಹ ಡಾ.ರಾಜ್ ಅವರು ನಮ್ಮನ್ನು ಅಗಲಿ ಹೋದಂತಹ ಸಂದರ್ಭದಲ್ಲಿ ಯಾವ ಸರ್ಕಾರಗಳೂ ಇಂತಹ ತೀರ್ಮಾನವನ್ನು ಹಿಂದೆ ಮಾಡಲಿಕ್ಕೆ ಆಗಿರಲಿಲ್ಲ, ಮುಂದೆಯೂ ಮಾಡಲಿಕ್ಕೆ ಆಗಲ್ಲ, ಹಾಗಾಗಿ ಇವರ್ಯಾರೋ ಅಹಿಂಸೆ ಅಂತ ಮಾತಾಡುತ್ತಾ ಇದ್ದೀರಲ್ಲ, ಇವರ್ಯಾಕೆ ಇದನ್ನು ಮಾತನಾಡುತ್ತಾ ಇದ್ದಾರೆ? ಅವರಿಗೆ ಒಂದು ಕಿವಿಮಾತನ್ನು ಹೇಳಲು ಬಯಸುತ್ತೇನೆ. ಕುಮಾರಸ್ವಾಮಿಯವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಹೋದ ಘಟನೆ ನಡೆಯಿತು. ಆ ಸಂದರ್ಭದಲ್ಲಿ ಸರ್ಕಾರ ಅವರದ್ದಿತ್ತು, ಅವರು ಮುಖ್ಯಮಂತ್ರಿಗಳಾಗಿದ್ರು. ಆಗ ಅವರು ತೆಗೆದುಕೊಂಡಂತಹ ನಿರ್ಣಯ ಮುಂದೆ ಬರುವ ದಿನಗಳಲ್ಲಿ ಇಂತಹ ಘಟನೆಗಳು ಏನಾದರೂ ಕಲಾಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವ ಕಲಾಭಿಮಾನಿಗಳಿಗೂ ಗೌರವ ಸಲ್ಲಿಸಬೇಕು, ಜೊತೆಯಲ್ಲಿ ಯಾರ್ಯಾರು ನಟರು ಕನ್ನಡನಾಡಿಗೆ ಕೊಡುಗೆಯನ್ನು ಕೊಟ್ಟಿದ್ದಾರೆ ಇಂತಹ ಗೌರವವನ್ನು ಅರ್ಪಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಒಂದು ಮಾರ್ಗದರ್ಶನವನ್ನು ನೀಡಿ ಮೇಲ್ಪಂಕ್ತಿ ಹಾಕಿಕೊಟ್ಟರು ತಪ್ಪೇನಿದೆ ಎಂದು ಪ್ರಶ್ನಿಸಿದರು.
ಡಾ.ವಿಷ್ಣುವರ್ಧನ್ ಅಗಲಿದ ಸಂದರ್ಭ ಸರ್ಕಾರ ಯಾವ ರೀತಿ ವರ್ತಿಸಿತು? ಅವರಿಗೆ ಯಾಕೆ ಗೌರವ ಕೊಡಬಾರದಾಗಿತ್ತು, ನಾವು ಬೇಡ ಅಂದಿದ್ವಾ, ಯಾವ ರೀತಿ ಕಲಾವಿದರನ್ನು ನಡೆಸಿಕೊಳ್ಳಬೇಕು ಎಂದು ಕುಮಾರಸ್ವಾಮಿಯವರು ಮೇಲ್ಪಂಕ್ತಿ ಹಾಕಿಕೊಟ್ಟು ಹೋದರು ಇದನ್ನು ಮಾಡಬಹುದಿತ್ತಲ್ಲ. ಫ್ಯಾನ್ ವಾರ ಗಳನ್ನು ಯಾರಪ್ಪ ಸೃಷ್ಟಿಮಾಡಿರೋದು? ಗೌರವ ಕೊಡೋದು ತಪ್ಪಾ? ಅವರಿಗೆಲ್ಲ ಏನಕ್ರಿ ಮಾತಾಡಲು ಹೇಳುತ್ತೀರಿ , ಧಮ್ ಇದ್ದರೆ ಬಂದು ಚುನಾವಣೆಗೆ ನಿಂತುಕೊಳ್ಳೋದಕ್ಕೆ ಹೇಳಿ, ಎಲ್ಲೋ ಕುಳಿತು ಅದೆಂತದ್ದೋ ಬರವಣಿಗೆ, ನಾನು ಸಾವಿರ ಬರೆಯುತ್ತೇನೆ ಈ ತರ ಎಂದು ಕಿಡಿಕಾರಿದರು.



