ಹಂಪಿ: ವಿಶ್ವಪ್ರಸಿದ್ಧ ಪಾರಂಪರಿಕ ಪ್ರವಾಸಿ ತಾಣವಾದ ಹಂಪಿಯಲ್ಲಿ ಪ್ರವಾಸಿಗರ ಹೆಚ್ಚೆಚ್ಚು ಫೋಟೋಗಳನ್ನು ತೆಗೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಫೋಟೋಗ್ರಫಿ ನಿಯಮಗಳನ್ನು ಸರಳೀಕರಿಸಿದೆ.
ಇದರಿಂದ ಇನ್ನು ಮುಂದೆ ಪ್ರವಾಸಿಗರು ತಮ್ಮ ಕೈಯಲ್ಲಿರುವ ಯಾವುದೇ ಕ್ಯಾಮೆರಾ ಅಥವಾ ಮೊಬೈಲ್ ಮೂಲಕ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಫೋಟೋಗಳನ್ನು ತೆಗೆದುಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ. ಇದಕ್ಕೂ ಮುನ್ನ ವಿಜಯ ವಿಠ್ಠಲ ದೇವಾಲಯ ಸಂಕೀರ್ಣ ಸೇರಿದಂತೆ ಕೆಲವು ಸ್ಥಳಗಳಲ್ಲಿ ಪ್ರತಿ ಕ್ಯಾಮೆರಾಗೆ ರೂ.50 ಶುಲ್ಕ ವಿಧಿಸಲಾಗುತ್ತಿತ್ತು. ಈಗ ಆ ಎಲ್ಲಾ ಶುಲ್ಕಗಳನ್ನು ತೆಗೆದುಹಾಕಲಾಗಿದೆ.
ಆದರೆ, ಟ್ರೈಪಾಡ್ ಮತ್ತು ಡ್ರೋನ್‌ಗಳನ್ನು ಬಳಸಲು ಬಯಸುವ ಛಾಯಾಗ್ರಾಹಕರು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಕುರಿತ ನಿಯಮಗಳು ಮುಂದುವರೆಯಲಿದ್ದು, ಚಲನಚಿತ್ರ ಚಿತ್ರೀಕರಣಕ್ಕೂ ಪ್ರತ್ಯೇಕ ಅನುಮತಿ ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



