ಮೈಸೂರು : ಭಗವಾನ್ ಬುದ್ಧನ ತತ್ವಗಳು ಮತ್ತು ಬೋಧನೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಜೀವನದ ಪ್ರತಿ ಹಂತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ಹೇಳಿದರು.
ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಭಗವಾನ ಬುದ್ಧ ಜಯಂತೋತ್ಸವ ಸಮಿತಿ ವತಿಯಿಂದ ಕರ್ನಾಟಕ ಕಲಾಮಂದಿರದದಲ್ಲಿ ಭಗವಾನ ಬುದ್ಧ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧನು ಇಡೀ ಜಗತ್ತಿಗೆ ಶಾಂತಿ ಮತ್ತು ಜ್ಞಾನದ ಬೆಳಕನ್ನು ನೀಡಿದ ಮಹಾಪುರುಷ. ಅವರ ದಮ್ಮದ ಹಾದಿಯಲ್ಲಿ ನಡೆದರೆ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಅಜ್ಞಾನದಿಂದ ಜ್ಞಾನದತ್ತ, ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ” ಎಂಬ ಮಂತ್ರದಂತೆ, ಮನುಷ್ಯನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಸುಜ್ಞಾನದ ಹಾದಿಯಲ್ಲಿ ನಡೆಸುವ ಶಕ್ತಿ ಬುದ್ಧನ ಬೋಧನೆಗಳಿಗಿದೆ ಎಂದು ಅವರು ತಿಳಿಸಿದರು.
ಬುದ್ಧನ ತತ್ವಗಳಿಂದ ಪ್ರೇರಿತರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತಕ್ಕೆ ಉತ್ತಮ ಸಂವಿಧಾನವನ್ನು ನೀಡುವ ಮೂಲಕ ಸಮಾನತೆಯ ಆಶಯವನ್ನು ಎತ್ತಿ ಹಿಡಿದಿದ್ದಾರೆ. ಆ ದಾರಿಯಲ್ಲಿ ಸಾಗುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಡೆದ ‘ವಿಶ್ವ ಶಾಂತಿಯ ಮೆರವಣಿಗೆ ನಡಿಗೆ’ ಇಂದಿನ ಅಸ್ತವ್ಯಸ್ತ ಜಗತ್ತಿಗೆ ಬುದ್ಧನ ಶಾಂತಿ ಮಂತ್ರ ಬಹಳ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ರಾಜಗೃಹದಲ್ಲಿ ಬುದ್ಧನ ಪ್ರವಚನ ಕೇಳಲು ಲಕ್ಷಾಂತರ ಜನ ಸೇರಿದ್ದರೂ, ಅಲ್ಲಿ ನೆಲೆಸಿದ್ದ ನಿಶ್ಯಬ್ದ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಕಂಡು ಅಂದಿನ ರಾಜನೇ ಅಚ್ಚರಿಗೊಂಡಿದ್ದ ಈ ಮೂಲಕ, ಶಿಸ್ತು ಮತ್ತು ಶಾಂತಿಯ ಮಹತ್ವವನ್ನು ಸಾರಿದರು ಎಂದರು.
ಸುಮಾರು 2,500 ವರ್ಷಗಳ ಹಿಂದಿನ ಬುದ್ಧನ ಜ್ಞಾನದ ದೀಪ್ತಿ ಇಂದಿಗೂ ಪ್ರಜ್ವಲಿಸುತ್ತಿದೆ. ಮುಂದಿನ ಪೀಳಿಗೆಗೆ ಈ ಬೋಧನೆಗಳನ್ನು ತಲುಪಿಸುವುದು ನಮ್ಮ ಜವಾಬ್ದಾರಿ,” ಎಂದರು.
ವಿಶ್ವಮೈತ್ರಿ ಬುದ್ಧ ವಿಹಾರ ಪೂಜ್ಯ ಡಾ. ಕಲ್ಯಾಣಸಿರಿ ಭಂತೇಜಿ ಅವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಒಳಗಿನ ಕೋಪ, ಅಸೂಯೆ ಮತ್ತು ದ್ವೇಷವನ್ನು ತ್ಯಜಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಬುದ್ಧನು ತೋರಿದ ಅಹಿಂಸೆಯ ಮಾರ್ಗವು ಇಂದಿನ ಅಶಾಂತಿಯುತ ಜಗತ್ತಿಗೆ ಅತಿ ಅವಶ್ಯಕವಾಗಿದೆ ಎಂದು ಹೇಳಿದರು.
ಮನುಷ್ಯನು ಸುಸಂಸ್ಕೃತನಾಗಿ ಬಾಳಲು ಪಂಚಶೀಲ ತತ್ವಗಳನ್ನು ಅನುಸರಿಸಬೇಕು. ಸುಳ್ಳು ಹೇಳದಿರುವುದು, ಹಿಂಸೆ ಮಾಡದಿರುವುದು ಮತ್ತು ಮದ್ಯಪಾನದಿಂದ ದೂರವಿರುವುದು ವ್ಯಕ್ತಿಯ ಗೌರವವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಬುದ್ಧನು ಸಾರಿದ ಸಮಾನತೆಯ ಸಂದೇಶವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯರಿಗೆ ಧಮ್ಮ ದೀಕ್ಷೆಯ ಮೂಲಕ ನೀಡಿದರು. ಜಾತಿ ವ್ಯವಸ್ಥೆಯ ಕಪಿಮುಷ್ಠಿಯಿಂದ ಹೊರಬಂದು ಮನುಷ್ಯತ್ವವನ್ನು ಗೌರವಿಸುವ ಸಂಸ್ಕೃತಿ ಬೆಳೆಯಬೇಕು ಎಂದು ತಿಳಿಸಿದರು.
ಬುದ್ಧನ ಪ್ರತಿಮೆಗೆ ಪೂಜೆ ಮಾಡುವುದು ಎಷ್ಟು ಮುಖ್ಯವೋ, ಅವರ ವಿಚಾರಗಳನ್ನು ನಮ್ಮ ನಡವಳಿಕೆಯಲ್ಲಿ ತರುವುದು ಅಷ್ಟೇ ಮುಖ್ಯ. ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನತ್ತ ಸಾಗುವುದೇ ನಿಜವಾದ ಬುದ್ಧ ಜಯಂತಿ,” ಎಂದರು.
ಜಾತಿ, ಮತ ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಮನುಷ್ಯರನ್ನಾಗಿ ಕಾಣುವ ಗುಣವನ್ನು ಬೆಳೆಸಿಕೊಳ್ಳುವುದು ಬುದ್ಧನಿಗೆ ನಾವು ಸಲ್ಲಿಸುವ ನಿಜವಾದ ಭಕ್ತಿ ಎಂದ ಅವರು
ಬುದ್ಧ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ನಿರಂತರವಾಗಿ ಹರಿಯುವ ಜ್ಞಾನದ ಧಾರೆ. ನಾವು ನಮ್ಮ ಮನೆಯಲ್ಲಿ ಬುದ್ಧನ ಫೋಟೋ ಇಡುವುದಕ್ಕಿಂತ ಮಿಗಿಲಾಗಿ, ನಮ್ಮ ಹೃದಯದಲ್ಲಿ ಬುದ್ಧನ ತತ್ವಗಳನ್ನು ಇಟ್ಟುಕೊಳ್ಳಬೇಕು ಎಂದರು.
ನಮಗೆ ಆಯುಧ ಹಿಡಿಯುವ ಯುದ್ಧ ಬೇಡ, ಬದಲಿಗೆ ಜನರ ಮನಸ್ಸನ್ನು ಗೆಲ್ಲುವ ಬುದ್ಧ ಬೇಕು. ಕರುಣೆ ಮತ್ತು ಮೈತ್ರಿಯ ಮೂಲಕ ಮಾತ್ರ ಜಗತ್ತನ್ನು ಬದಲಾಯಿಸಲು ಸಾಧ್ಯ, ಎಂದು ತಿಳಿಸಿದರು.
ಪ್ರಜಾ ಪರಿವರ್ತನ ವೇದಿಕೆ ಬಿ. ಗೋಪಾಲ್ ಅವರು ಮಾತನಾಡಿ ಬುದ್ಧನ ಬೋಧನೆಗಳು ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗಿಲ್ಲ, ಅವು ವೈಜ್ಞಾನಿಕ ಮತ್ತು ಮಾನವೀಯ ಮೌಲ್ಯಗಳಾಗಿವೆ ಎಂದು ಹೇಳಿದರು.
ಸಮಾಜದಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆಗಳನ್ನು ಕಿತ್ತೊಗೆಯಲು ಬುದ್ಧನ ‘ಬೌದ್ಧಿಕ ಕ್ರಾಂತಿ’ ಇಂದಿಗೂ ಅಗತ್ಯವಾಗಿದೆ. ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದೇ ಬುದ್ಧನಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಅವರು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಬುದ್ಧನ ತತ್ವಗಳನ್ನು ಆಧುನಿಕ ಭಾರತಕ್ಕೆ ಸಂವಿಧಾನದ ಮೂಲಕ ಪರಿಚಯಿಸಿದರು. ಪ್ರಜಾಪ್ರಭುತ್ವದ ಯಶಸ್ಸು ಬುದ್ಧನ ಸಮಾನತೆಯ ಆಶಯದಲ್ಲಿದೆ ಎಂದು ತಿಳಿಸಿದರು.
ಇಂದಿನ ಯುವ ಪೀಳಿಗೆಯು ಇತಿಹಾಸ ಮತ್ತು ತತ್ವಜ್ಞಾನವನ್ನು ಓದಿಕೊಳ್ಳಬೇಕು. ಕೇವಲ ಆಚರಣೆಗಳಿಗೆ ಸೀಮಿತವಾಗದೆ ಬುದ್ಧನ ತತ್ವಗಳನ್ನು ಆಚರಣೆಗೆ ತರಬೇಕು ಎಂದು ಹೇಳಿದರು.
ಬುದ್ಧ ಎಂದರೆ ಕೇವಲ ವಿಗ್ರಹವಲ್ಲ, ಅದೊಂದು ವಿಚಾರಧಾರೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗೆ ಬುದ್ಧತ್ವವನ್ನು ಕಂಡುಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ, ಎಂದು ತಿಳಿಸಿದರು.
ಸಮಾಜದಲ್ಲಿ ಇಂದಿಗೂ ಬೇರೂರಿರುವ ಅಸ್ಪೃಶ್ಯತೆಯಂತಹ ಪಿಡುಗುಗಳನ್ನು ತೊಡೆದುಹಾಕಲು ಬುದ್ಧನ ‘ಧಮ್ಮ’ ಮಾರ್ಗವು ನಮಗೆ ದಾರಿದೀಪವಾಗಿದೆ. ಸಂವಿಧಾನದ ಆಶಯಗಳಾದ ಸಮಾನತೆ ಮತ್ತು ಭ್ರಾತೃತ್ವವು ಬುದ್ಧನ ತತ್ವಗಳಿಂದಲೇ ಬಂದಿವೆ ಎಂದರು.
ಶಿಕ್ಷಣವೇ ಶಕ್ತಿಯಾಗಿದ್ದು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಅಂಬೇಡ್ಕರ್ ಅವರ ಸಂದೇಶವನ್ನು ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಾಬೋಧಿ ಶಾಖೆ ಪೂಜ್ಯ ಸೋಭಾನ ಭಂತೇಜಿ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ ಸುದರ್ಶನ್, ಮಾಜಿ ಮೇಯರ್ ಪುರುಷೋತ್ತಮ್,ಗಣ್ಯರಾದ ಸೋಮಯ್ಯ ಮಳಿಯೂರು,ಭಗವಾನ ಬುದ್ಧ ಜಯಂತೋತ್ಸವ ಸಮಿತಿ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.



