ಚಾಮರಾಜನಗರ : ನಿಧಿ ಆಸೆಗಾಗಿ ಹೆತ್ತ ತಾಯಿಯನ್ನೇ ಪಾಪಿ ಪುತ್ರನೋರ್ವ ಬಲಿ ಕೊಡಲು ಮುಂದಾಗಿದ್ದ ಆಘಾತಕಾರಿ ಘಟನೆ ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ನಡೆದಿದೆ. ಇಂದು (ಮೇ 1) ಹುಣ್ಣಿಮೆ ಹಿನ್ನೆಲೆಯಲ್ಲಿ ಬಲಿ ಕೊಟ್ಟರೆ ನಿಧಿ ಸಿಗುತ್ತೆಂದು ಸ್ಕೆಚ್ ಹಾಕಿದ್ದ ಕೊಂಡಯ್ಯನ ಮಾದಶೆಟ್ಟಿ, 80 ವರ್ಷದ ಕಣ್ಣು ಕಾಣದ ಮತ್ತು ಕಿವಿ ಕೇಳದ ತಾಯಿ ಮಾದಮ್ಮಶೆಟ್ಟಿಯನ್ನು ಬಲಿ ಕೊಡಲು ಸಿದ್ಧತೆ ನಡೆಸಿದ್ದ.
ಬೆಳಗ್ಗೆ ತನ್ನ ಮನೆಯಲ್ಲೇ 4 ಅಡಿ ಗುಂಡಿ ತೆಗೆದು ಮಾಟದ ಮಡಕೆ ಇಟ್ಟು ಲಿಂಬೆಹಣ್ಣು, ಅರಿಶಿನ ಕುಂಕುಮ ಹಾಗೂ ಕಳಸವಿಟ್ಟು ಪೂಜೆ ಮಾಡಿದ್ದ. ಈ ಬಗ್ಗೆ ಅನುಮಾನಗೊಂಡು ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮನೆಗೆ ಪೊಲೀಸರು ಬರ್ತಿದ್ದಂತೆ ಮಾಟಗಾರ ಎಸ್ಕೇಪ್ ಆಗಿದ್ದು, ಮಾದಶೆಟ್ಟಿಯನ್ನು ಬಂಧಿಸಲಾಗಿದೆ. ನಿಧಿಗಾಗಿ ಮಾಟ ಮಾಡಿದ ವಿಚಾರ ತಿಳಿದು ಸಾಗಡೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



