ನವದೆಹಲಿ : ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ದೆಹಲಿ ಸಚಿವಾಲಯದಲ್ಲಿ 22ನೇ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ 2026 (CTTC 2026) ರ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಈ ಪ್ರತಿಷ್ಠಿತ ಅಂತರಾಷ್ಟ್ರೀಯ ಪಂದ್ಯಾವಳಿಯು ಜುಲೈ 27 ರಿಂದ ಆಗಸ್ಟ್ 2, 2026 ರವರೆಗೆ ನವದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ದೆಹಲಿ ಸರ್ಕಾರ ಮತ್ತು ಭಾರತೀಯ ಟೇಬಲ್ ಟೆನಿಸ್ ಫೆಡರೇಶನ್ (TTFI) ಜಂಟಿಯಾಗಿ ಈ ಚಾಂಪಿಯನ್‌ಶಿಪ್ ಅನ್ನು ಆಯೋಜಿಸುತ್ತಿವೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್ ಸೇರಿದಂತೆ 35ಕ್ಕೂ ಹೆಚ್ಚು ಕಾಮನ್‌ವೆಲ್ತ್ ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಆಧುನಿಕ ಸೌಲಭ್ಯಗಳನ್ನು ಹೊಂದಿರುವ ತ್ಯಾಗರಾಜ್ ಸ್ಟೇಡಿಯಂ ಈ ಕೂಟದ ಪ್ರಮುಖ ಕೇಂದ್ರವಾಗಿರಲಿದೆ.
ಈ ಘೋಷಣೆಯ ಸಂದರ್ಭದಲ್ಲಿ ದೆಹಲಿ ಸರ್ಕಾರದ ಕ್ಯಾಬಿನೆಟ್ ಸಚಿವ ಆಶಿಶ್ ಸೂದ್, ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಫೆಡರೇಶನ್ ಅಧ್ಯಕ್ಷ ವಿವೇಕ್ ಕೊಹ್ಲಿ, ಸಲಹೆಗಾರ ಬ್ರಿಜೇಶ್ ಮಾಥುರ್, TTFI ಉಪಾಧ್ಯಕ್ಷ ರಾಜೀವ್ ದುಗ್ಗಲ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಸಂದೀಪ್ ಗುಪ್ತಾ ಸೇರಿದಂತೆ ಕ್ರೀಡಾ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಈ ಕ್ರೀಡಾಕೂಟವು ಜಾಗತಿಕ ಕ್ರೀಡಾ ಭೂಪಟದಲ್ಲಿ ದೆಹಲಿಯ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ. ಆಟಗಾರರು ಮತ್ತು ಪ್ರೇಕ್ಷಕರಿಗೆ ಅತ್ಯುತ್ತಮ ಮೂಲಸೌಕರ್ಯ ಮತ್ತು ಸುಗಮ ವ್ಯವಸ್ಥೆಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ‘ವಿಷನ್ 2036 ಒಲಿಂಪಿಕ್ಸ್’ ಮಿಷನ್‌ಗೆ ಅನುಗುಣವಾಗಿ ದೆಹಲಿಯ ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಅಂತರಾಷ್ಟ್ರೀಯ ಈವೆಂಟ್‌ಗಳನ್ನು ಉತ್ತೇಜಿಸಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.



