ಬೆಂಗಳೂರು : ಎಸ್‌ಐಆರ್ ಚುನಾವಣೆಯ ಪ್ರಕ್ರಿಯೆಯಲ್ಲಿ ಒಂದು ಭಾಗ ಮಾತ್ರ. ಅದರ ಹಿಂದೆ ದೊಡ್ಡ ಮಟ್ಟದ ರಾಜಕೀಯ ಮತ್ತು ಆಡಳಿತಾತ್ಮಕ ತಂತ್ರಗಳು ಕಾರ್ಯನಿರ್ವಹಿಸಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.
ಇನ್ನು ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪಶ್ಚಿಮ ಬಂಗಾಳದಲ್ಲಿ 50 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಐಆರ್ ಮೂಲಕ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಹೆಸರುಗಳ ಸಂಖ್ಯೆ, ಆ ಕ್ಷೇತ್ರಗಳ ಗೆಲುವಿನ ಅಂತರಕ್ಕಿಂತ ಹೆಚ್ಚಿತ್ತು ಎಂಬ ಆರೋಪಗಳಿವೆ.
ಈ ಕ್ಷೇತ್ರಗಳ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ ಎಂದಿದ್ದಾರೆ. ಆರಂಭದಿಂದ, ಅಂತ್ಯದವರೆಗೆ ಫಲಿತಾಂಶಗಳನ್ನು ಪೂರ್ವ ನಿರ್ಧರಿಸಿದ ಬಳಿಕ, ಸ್ವಾಯತ್ತ ಸಂಸ್ಥೆಗಳನ್ನು ಹೇಗೆ ನಿಯಂತ್ರಿಸಬಹುದು ಎಂಬುದಕ್ಕೆ ಈ ಚುನಾವಣೆ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಸಂಬಂಧಪಟ್ಟಂತೆ ಸೀಮಿತವಾಗಿ ಲಾಜಿಕಲ್ ಡಿಸ್ಕ್ರೆಪೆನ್ಸಿ ಎಂಬ ಹೊಸ ವರ್ಗವನ್ನು ಪರಿಚಯಿಸಲಾಗಿದ್ದು, ಇದರ ಅಡಿ ಸಂದೇಹಾಸ್ಪದ ಮತದಾರರು ಎಂದು ಗುರುತಿಸಿ, 27 ಲಕ್ಷ ಮಂದಿ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಕೇಂದ್ರ ಅರೆಸೈನಿಕ ಪಡೆಗಳನ್ನು ಅತ್ಯಧಿಕ ಪ್ರಮಾಣದಲ್ಲಿ ನಿಯೋಜಿಸಿ, ನೆಲಮಟ್ಟದಲ್ಲಿ ಮತದಾರರ ಮೇಲೆ ಒತ್ತಡ ಹಾಗೂ ಭೀತಿಯ ವಾತಾವರಣ ನಿರ್ಮಾಣ ಮಾಡಲಾಗಿದ್ದು, ಜಿಲ್ಲಾ ಪೊಲೀಸ್ ಅಧಿಕಾರಿಗಳು, ನಾಗರಿಕ ಆಡಳಿತಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡಿ, ಅವರ ಬದಲು ಕೇಂದ್ರ ಅಥವಾ ಕೇಂದ್ರ ಸರ್ಕಾರದ ಪರವಾಗಿರುವ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎನ್ನಲಾಗಿದೆ.
ಇನ್ನೂ ಮತ ಎಣಿಕೆ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯ ಸಂಸ್ಥೆಗಳ ಸಿಬ್ಬಂದಿಯನ್ನು ಮೇಲ್ವಿಚಾರಕರು ಹಾಗೂ ಏಜೆಂಟ್‌ಗಳಾಗಿ ನೇಮಿಸಲಾಗಿದೆ. ವಿರೋಧ ಪಕ್ಷಗಳಿಗೆ ಅನುಕೂಲಕರವಾಗಿರದ ಮತಗಟ್ಟೆಗಳನ್ನು ಆಯ್ಕೆಮಾಡಿ ಮರು ಮತದಾನಕ್ಕೆ ಆದೇಶ ನೀಡಲಾಗಿದೆ. ಮತದಾನದ ಮುನ್ನವೇ ವಿರೋಧ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರನ್ನು ಗುರಿಯಾಗಿಸಿಕೊಂಡು ಮುನ್ನೆಚ್ಚರಿಕಾ ಬಂಧನ ಪಟ್ಟಿಗಳನ್ನು ಸಿದ್ಧಪಡಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಬಳಿಕ, ಬಿಜೆಪಿ ಬಯಸಿದರೆ ಚುನಾವಣಾ ಆಯೋಗ ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುತ್ತದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ ಎಂದು ದೂರಿದ್ದಾರೆ.



