Thursday, May 7, 2026
Google search engine

Homeಆರೋಗ್ಯಸೀಳು ತುಟಿ, ಅಂಗುಳ ಸಮಸ್ಯೆಗೆ ಸಮಗ್ರ ಚಿಕಿತ್ಸೆ ಅಗತ್ಯ :ದಿನೇಶ್ ಗುಂಡೂರಾವ್

ಸೀಳು ತುಟಿ, ಅಂಗುಳ ಸಮಸ್ಯೆಗೆ ಸಮಗ್ರ ಚಿಕಿತ್ಸೆ ಅಗತ್ಯ :ದಿನೇಶ್ ಗುಂಡೂರಾವ್

ಮೈಸೂರು: ಸೀಳು ತುಟಿ ಮತ್ತು ಸೀಳು ಅಂಗುಳ ಸಮಸ್ಯೆ ಹೊಂದಿರುವ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಸಮಗ್ರವಾದ ಚಿಕಿತ್ಸೆ ನೀಡುವುದು ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.

ಭಾರತೀಯ ಕ್ಲಫ್ಟ್ ತುಟಿ ಅಂಗುಳ ಮತ್ತು ಕ್ರೇನಿಯೊಫೇಶಿಯಲ್ ಅನೋಮಲಿಗಳ ಸಂಘದ ವತಿಯಿಂದ ಇಂಡೋಕ್ಲೆಫ್ಟ್ಕಾನ್ 2026ರ 24 ನೇ ವಾರ್ಷಿಕ ಸಮ್ಮೇಳನವನ್ನು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನೈಮಿಷಂ ಕ್ಯಾಂಪಸ್ ನ ನಾಲೆಡ್ಜ್ ಪಾರ್ಕ್ ನಲ್ಲಿ ಉದ್ಘಾಟಿಸಿ ಮಾತನಾಡಿದರು. ಅರಿವಿನ ಕೊರತೆ ಮತ್ತು ಸಮಯೋಚಿತ ಚಿಕಿತ್ಸೆ ನೀಡದೆ ಇರುವುದರಿಂದ ಸೀಳು ತುಟಿ ಮತ್ತು ಸೀಳು ಅಂಗುಳ ಸಮಸ್ಯೆ ಜನನದಿಂದಲೇ ಬರುವಂತದ್ದಾಗಿದೆ. ಆದರೆ ಸರಿಯಾದ ಸಮಯದಲ್ಲಿ ತಜ್ಞರ ಸಲಹೆ ಮತ್ತು ಸಮಸ್ಯೆಯ ಗುರುತಿಸುವಿಕೆ ಆಗದಿದ್ದರೆ ಮುಂದಿನ ದಿನಗಳಲ್ಲಿ ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ವಾಸಿಸುವ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಿದೆ. ನಮ್ಮ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದಾಗ ಇಂತಹ ಸಮಸ್ಯೆ ಇರುವ ಮಕ್ಕಳನ್ನು ಗುರುತಿಸಿ, ಅವರಿಗೆ ಎಲ್ಲಿ ಮತ್ತು ಹೇಗೆ ಚಿಕಿತ್ಸೆ ಪಡೆಯಬೇಕೆಂದು ಮಾರ್ಗದರ್ಶನ ನೀಡಬೇಕು. ಸಮಗ್ರ ಚಿಕಿತ್ಸಾ ವಿಧಾನ ಈ ಸಮಸ್ಯೆಯ ಚಿಕಿತ್ಸೆಯು ಕೇವಲ ಒಂದು ಬಾರಿಯ ಶಸ್ತ್ರ ಚಿಕಿತ್ಸೆಯಿಂದ ಸಾಧ್ಯವಿಲ್ಲ ಇದಕ್ಕೆ ಹಲವು ತಜ್ಞರ ಅವಶ್ಯಕತೆ ಇರುತ್ತದೆ. ನುರಿತ ಶಸ್ತ್ರಚಿಕಿತ್ಸಕರು, ಆರ್ಥೋಡಾಂಟಿಸ್ಟ್ಗಳು, ಸರ್ಜನ್ಗಳು, ವಾಕ್ ಚಿಕಿತ್ಸಕರು ಇವರೆಲ್ಲರೂ ಒಗ್ಗೂಡಿ ಚಿಕಿತ್ಸೆ ನೀಡಿದಾಗ ಮಾತ್ರ ಮಗುವಿನ ಬೆಳವಣಿಗೆ ಸರಿಯಾಗಿ ಆಗಲು ಸಾಧ್ಯ. ಸರ್ಕಾರದ ಸಹಕಾರ ಮತ್ತು ಕಳೆದ 20 ವರ್ಷಗಳಿಂದ ಸ್ಮೈಲ್ ಟ್ರೈನ್ ಸಂಸ್ಥೆಯು ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಈವರೆಗೆ ಸಂಸ್ಥೆಯು 7 ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಸಾಮಾನ್ಯ ಸಾಧನೆಯಲ್ಲ ಎಂದು ಹೇಳಿದರು.

ಬಡ ಜನರಿಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನoತಹ ದೊಡ್ಡ ನಗರಗಳಿಗೆ ಬರಲು ಸಮಯ ಪ್ರಯಾಣ ಮತ್ತು ಇತರ ವೆಚ್ಚಗಳ ಸಮಸ್ಯೆ ಇರುತ್ತದೆ. ಇದನ್ನು ಸರಿದೂಗಿಸಲು ಮತ್ತು ಅತ್ಯುತ್ತಮ ಚಿಕಿತ್ಸೆ ನೀಡಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದು ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಮ್ಮೇಳನದ ಘೋಷ ವಾಕ್ಯವಾದ ಸಂಪರ್ಕಿಸಿ, ಸಂವಹನ ನಡೆಸಿ, ಮತ್ತು ಸಹಕರಿಸಿ ಎಂಬುದು ಅತ್ಯಂತ ಸೂಕ್ತವಾಗಿದೆ. ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಇಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿವಾರಿಸಲು ಸಾಧ್ಯ. ಆಧುನಿಕ ತಂತ್ರಜ್ಞಾನದ ಬಳಕೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆಗಳು ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು ಮತ್ತು ಹೊಸ ಸಾಮಗ್ರಿಗಳನ್ನು ಬಳಸಿಕೊಳ್ಳುವ ಮೂಲಕ ಚಿಕಿತ್ಸೆಯ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಹೇಳಿದರು.

ದಕ್ಷಿಣ ಏಷ್ಯಾದ ಸ್ಮೈಲ್ ಟ್ರೈನ್ ನ ಪ್ರಾದೇಶಿಕ ನಿರ್ದೇಶಕ ರೇಣು ಮೆಹ್ತಾ ಮಾತನಾಡಿ ಸೀಳು ತುಟಿ ಮತ್ತು ಸೀಳು ಅಂಗುಳಿನ ಸಮಸ್ಯೆಯೊಂದಿಗೆ ಜನಿಸಿದ ಪ್ರತಿಯೊಂದು ಮಗುವಿನ ಬಗ್ಗೆ ಸ್ಮೈಲ್ ಟ್ರೈನ್ ಸ್ಥಳೀಯವಾಗಿ ಕಾಳಜಿ ವಹಿಸುತ್ತದೆ. 1999 ರಿಂದ ಜಾಗತಿಕವಾಗಿ 20 ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಿಗೆ ಸ್ಮೈಲ್ ಟ್ರೈನ್ ಸಂಸ್ಥೆಯು ಬೆಂಬಲ ನೀಡುತ್ತಿದೆ. ಕಳೆದ 26 ವರ್ಷಗಳಲ್ಲಿ ಭಾರತದಲ್ಲಿ 7,50,000 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಸ್ಮೈಲ್ ಟ್ರೈನ್ ಸ್ಥಳೀಯ ಆಸ್ಪತ್ರೆಗಳು, ವೈದ್ಯರು ಮತ್ತು ಶಸ್ತ್ರಚಿಕಿತ್ಸಕರೊಂದಿಗೆ ಕೆಲಸ ಮಾಡುತ್ತದೆ, ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ಎಲ್ಲರಿಗೂ ತಲುಪಿಸಲು ಭಾರತದ 13 ರಾಜ್ಯಗಳೊಂದಿಗೆ ಅಧಿಕೃತ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಹೇಳಿದರು.

ಐಎಸ್‌ಸಿಎಲ್‌ ಪಿಸಿಎನ ಕಾರ್ಯದರ್ಶಿ ಡಾ.ಪ್ರೀತಮ್ ಶೆಟ್ಟಿ ಮಾತನಾಡಿ, ತಮ್ಮ ಸಂಘವು ಒಂದು ಉತ್ತಮ ತಂಡವಾಗಿದ್ದು, ಇದರಲ್ಲಿ ಶಸ್ತ್ರಚಿಕಿತ್ಸಕರು, ಸ್ಪೀಚ್ ಪ್ಯಾಥೋಲಜಿಸ್ಟ್ಗಳು, ಆರ್ಥೊಡಾಂಟಿಸ್ಟ್ಗಳು, ಪೀಡಿಯಾಟ್ರಿಶಿಯನ್ಸ್, ಅರಿವಳಿಕೆ ತಜ್ಞರು ಮತ್ತು ನ್ಯೂರೋ ಸರ್ಜನ್ ಗಳನ್ನು ಹೊಂದಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಐಎಸ್‌ಸಿಎಲ್‌ ಪಿಸಿಎನ ಅಧ್ಯಕ್ಷೆ ಡಾ.ಎಂ.ಪುಷ್ಪಾವತಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular