ನವದೆಹಲಿ : ಕಳೆದ ಎರಡು ದಿನಗಳಲ್ಲಿ ಸುಮಾರು 87.66 ಲಕ್ಷ ಸಿಲಿಂಡರ್ ಬುಕಿಂಗ್‌ಗೆ ಪ್ರತಿಯಾಗಿ 97 ಲಕ್ಷಕ್ಕೂ ಹೆಚ್ಚು ಮನೆಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ಅಡುಗೆ ಅನಿಲದ ಆನ್‌ಲೈನ್ ಬುಕಿಂಗ್ ಪ್ರಮಾಣವು ಈಗ ಶೇ. 99ಕ್ಕೆ ತಲುಪಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಸಂಪೂರ್ಣ ಸಾಮಾನ್ಯವಾಗಿದೆ. ವಿತರಕರ ಮಟ್ಟದಲ್ಲಿ ಅಕ್ರಮ ತಡೆಯಲು ಶೇ. 95ರಷ್ಟು ವಿತರಣೆಯನ್ನು ಮೊಬೈಲ್ ಒಟಿಪಿ (OTP) ಆಧಾರದ ಮೇಲೆ ಮಾಡಲಾಗುತ್ತಿದೆ.
ಕಳೆದ ಎರಡು ದಿನಗಳಲ್ಲಿ ಸುಮಾರು 1.11 ಲಕ್ಷ (5 ಕೆಜಿ) ಸಣ್ಣ ಸಿಲಿಂಡರ್‌ಗಳು ಮಾರಾಟವಾಗಿವೆ. ವಲಸೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ತೈಲ ಕಂಪನಿಗಳು 10,700ಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿವೆ.
ಕಳೆದ ಎರಡು ದಿನಗಳಲ್ಲಿ 15,493 ಮೆಟ್ರಿಕ್ ಟನ್‌ಗಿಂತ ಹೆಚ್ಚು ವಾಣಿಜ್ಯ ಎಲ್‌ಪಿಜಿ ಮಾರಾಟವಾಗಿದೆ. ಇದು ಸುಮಾರು 8.15 ಲಕ್ಷ (19 ಕೆಜಿ) ಸಿಲಿಂಡರ್‌ಗಳಿಗೆ ಸಮಾನವಾಗಿದೆ.
ಒಟ್ಟು 9.16 ಲಕ್ಷ ಪಿಎನ್‌ಜಿ ಸಂಪರ್ಕಗಳ ಮೂಲಸೌಕರ್ಯ ಸಿದ್ಧವಿದ್ದು, ಅದರಲ್ಲಿ 6.5 ಲಕ್ಷ ಸಂಪರ್ಕಗಳಿಗೆ ಗ್ಯಾಸ್ ಪೂರೈಕೆ ಆರಂಭವಾಗಿದೆ. ಸುಮಾರು 7.08 ಲಕ್ಷ ಹೊಸ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.
ಕಾಳಸಂತೆ ತಡೆಗೆ ಕ್ರಮಗಳು:
ಎಲ್‌ಪಿಜಿ ದಾಸ್ತಾನು ಮತ್ತು ಕಾಳಸಂತೆ ಮಾರಾಟವನ್ನು ತಡೆಯಲು ದೇಶಾದ್ಯಂತ ತಪಾಸಣೆ ತೀವ್ರಗೊಳಿಸಲಾಗಿದೆ. ಗುರುವಾರ ಒಂದೇ ದಿನ ದೇಶಾದ್ಯಂತ 2,000ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ. ನಿಯಮ ಉಲ್ಲಂಘಿಸಿದ 378 ವಿತರಕರಿಗೆ ದಂಡ ವಿಧಿಸಲಾಗಿದ್ದು, 76 ಗ್ಯಾಸ್ ಏಜೆನ್ಸಿಗಳನ್ನು ಅಮಾನತುಗೊಳಿಸಲಾಗಿದೆ.
ತೈಲ ಬೆಲೆ ಮತ್ತು ಲಭ್ಯತೆ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರೂ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸ್ಥಿರವಾಗಿವೆ. ‘ಹಾರ್ಮುಜ್ ಜಲಸಂಧಿ’ ಮುಚ್ಚಲ್ಪಟ್ಟಿದ್ದರೂ ಸಹ, ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ದೇಶದ ಎಲ್ಲಾ ರಿಫೈನರಿಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಚ್ಚಾ ತೈಲದ ಸಾಕಷ್ಟು ಸಂಗ್ರಹವಿದೆ.
ಸರ್ಕಾರದ ಮನವಿ
ಸಾರ್ವಜನಿಕರು ಆತಂಕಕ್ಕೊಳಗಾಗಿ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿಯನ್ನು ಹೆಚ್ಚುವರಿಯಾಗಿ ಖರೀದಿಸಿ ಸಂಗ್ರಹಿಸಿಡಬಾರದು. ವದಂತಿಗಳಿಗೆ ಕಿವಿಗೊಡಬೇಡಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕವೇ ಬುಕಿಂಗ್ ಮಾಡಿ ಎಂದು ಸರ್ಕಾರ ಜನರಲ್ಲಿ ಮನವಿ ಮಾಡಿದೆ. (ಏಜೆನ್ಸಿಸ್)



