Sunday, May 10, 2026
Google search engine

Homeರಾಜಕೀಯಇಲ್ಲಿ CM ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ: ರಾಜ್ಯ ಸರ್ಕಾರದ ವಿರುದ್ದ ಮೋದಿ ಲೇವಡಿ!

ಇಲ್ಲಿ CM ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ: ರಾಜ್ಯ ಸರ್ಕಾರದ ವಿರುದ್ದ ಮೋದಿ ಲೇವಡಿ!

ಬೆಂಗಳೂರು: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಾಖಲಿಸಿದ ಐತಿಹಾಸಿಕ ಜಯದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಆಂತರಿಕ ಬಿಕ್ಕಟ್ಟನ್ನು ಗುರಿಯಾಗಿಸಿಕೊಂಡು ಇಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ದುಸ್ಥಿತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟ ಪ್ರಧಾನಿ, ಕಾಂಗ್ರೆಸ್ ಎಲ್ಲೆಲ್ಲಿ ಬರುತ್ತದೆಯೋ ಅಲ್ಲೆಲ್ಲಾ ಸಮಸ್ಯೆಗಳು ಗ್ಯಾರಂಟಿ. ಹಿಮಾಚಲ ಪ್ರದೇಶದಲ್ಲಿ ಪೌರಕಾರ್ಮಿಕರಿಗೆ ಸಂಬಳವಿಲ್ಲ, ತೆಲಂಗಾಣದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿಯುತ್ತಿದೆ. ಕೇರಳದಲ್ಲಿ ಬಹುಮತ ಸಿಕ್ಕರೂ ಸಿಎಂ ಆಯ್ಕೆ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಕರ್ನಾಟಕದಲ್ಲಿ ಕುರ್ಚಿ ಕಿತ್ತಾಟ ಜೋರಾಗಿದ್ದು, ಮುಖ್ಯಮಂತ್ರಿಗಳು ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ ಎಂಬ ಗ್ಯಾರಂಟಿಯೇ ಇಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಸರ್ಕಾರಗಳು ರಾಜ್ಯದ ಖಜಾನೆಯನ್ನು ಲೂಟಿ ಹೊಡೆಯುತ್ತಿವೆ ಎಂದು ಆರೋಪಿಸಿದ ಅವರು, ರಾಜಸ್ಥಾನದ ಹಾದಿಯಲ್ಲೇ ಕರ್ನಾಟಕವೂ ಸಾಗುತ್ತಿದೆ ಎಂದು ಎಚ್ಚರಿಸಿದರು. ಅಭಿವೃದ್ಧಿಗಿಂತ ಹೆಚ್ಚಾಗಿ ನಾಯಕರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಮತ್ತು ಲೂಟಿ ಮಾಡಿದ ಹಣದ ಹಂಚಿಕೆಗಾಗಿ ಕಿತ್ತಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿರುವುದನ್ನು ಪ್ರಜಾಪ್ರಭುತ್ವದ ಗೆಲುವು ಎಂದು ಬಣ್ಣಿಸಿದ ಮೋದಿ, ಒಮ್ಮೆ 3 ಸ್ಥಾನ ಗೆದ್ದಿದ್ದ ಬಿಜೆಪಿ ಇಂದು ಬಂಗಾಳದಲ್ಲಿ ದಶಕಗಳ ಅರಾಜಕತೆಯನ್ನು ಕೊನೆಗಾಣಿಸಿದೆ. ಇದೇ ಹಾದಿಯಲ್ಲಿ ಕೇರಳದಲ್ಲೂ ಮುಂದಿನ ದಿನಗಳಲ್ಲಿ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಸ್ಸಾಂನಲ್ಲಿ ಸತತ ಎರಡನೇ ಬಾರಿ ಜನಾದೇಶ ಸಿಕ್ಕಿರುವುದು ನವ ಭಾರತದ ಶಕ್ತಿಯನ್ನು ತೋರಿಸುತ್ತದೆ ಎಂದರು.

ಬೆಂಗಳೂರಿನ ಯುವಶಕ್ತಿಯನ್ನು ಶ್ಲಾಘಿಸಿದ ಪ್ರಧಾನಿ, ಇಡೀ ಜಗತ್ತು ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತಿದ್ದರೆ ಅದಕ್ಕೆ ಕನ್ನಡಿಗರ ಐಟಿ ನೈಪುಣ್ಯವೇ ಕಾರಣ. ಬೆಂಗಳೂರು ಭಾರತದ ಅಭಿವೃದ್ಧಿಯ ಎಂಜಿನ್ ಆಗಿದೆ ಎಂದು ಮುಕ್ತಕಂಠದಿಂದ ಕೊಂಡಾಡಿದರು. ಇದೇ ವೇಳೆ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವದ ಅಂಗವಾಗಿ ನೂತನ ಧ್ಯಾನ ಮಂದಿರ ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ ಎಂದು ಆಧ್ಯಾತ್ಮಿಕ ಬಲದ ಬಗ್ಗೆ ಮಾತನಾಡಿದರು.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ತಡೆಹಿಡಿದಿದ್ದನ್ನು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಸಾಮಾನ್ಯ ವರ್ಗದ ಮಹಿಳೆಯರಿಗೆ ರಾಜಕೀಯ ಶಕ್ತಿ ಸಿಗದಂತೆ ದ್ರೋಹ ಮಾಡಿದೆ. ಕರ್ನಾಟಕದ ಮಹಿಳೆಯರು ಈ ದ್ರೋಹವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರು ಮೋದಿಯವರಿಗೆ 13 ಕೆಜಿಯ ಬೆಳ್ಳಿಯ ಪ್ರತಿಮೆ ನೀಡಿ ಸನ್ಮಾನಿಸಿದರು.

RELATED ARTICLES
- Advertisment -
Google search engine

Most Popular