ನವದೆಹಲಿ: ಭಾರತದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ , ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಳೆದ 10 ವಾರಗಳಲ್ಲಿ ಅಂದಾಜು 1 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಶೀಘ್ರವೇ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ಗಡಿ ದಾಟಿದೆ. ವಿಶ್ವದೆಲ್ಲೆಡೆ ತೈಲಕ್ಕೆ ಭಾರಿ ಬೇಡಿಕೆ ಹೆಚ್ಚಾಗಿದೆ.
ಜಾಗತಿಕವಾಗಿ ಬೆಲೆ ಏರಿಕೆಯಾಗಿದ್ದರೂ, ಭಾರತದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಏಪ್ರಿಲ್ 2022 ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸದೆ ಸ್ಥಿರವಾಗಿ ಕಾಯ್ದುಕೊಂಡಿವೆ. ಇದರಿಂದಾಗಿ ಕಂಪನಿಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.
ಪ್ರಸ್ತುತ ಈ ಕಂಪನಿಗಳು ಪ್ರತಿದಿನ ಅಂದಾಜು 1,600 ರಿಂದ 1,700 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಸುಮಾರು 18 ರಿಂದ 21 ರೂ. ಮತ್ತು ಡೀಸೆಲ್ ಮೇಲೆ 28 ರಿಂದ 35 ರೂ. ವರೆಗೆ ನಷ್ಟವಾಗುತ್ತಿದೆ.
ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ದುರ್ಬಲಗೊಳ್ಳುತ್ತಿರುವುದರಿಂದ ತೈಲ ಆಮದು ವೆಚ್ಚ ಮತ್ತಷ್ಟು ಹೆಚ್ಚಾಗುತ್ತಿದೆ. ಯುದ್ಧದ ಕಾರಣದಿಂದಾಗಿ ಹಡಗುಗಳ ಮಾರ್ಗ ಬದಲಾವಣೆ ಮತ್ತು ವಿಮಾ ಕಂತುಗಳ ಏರಿಕೆಯಿಂದಾಗಿ ಸಾಗಣೆ ವೆಚ್ಚವೂ ಹೆಚ್ಚಾಗಿದೆ.
ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಮೂಲಕ ಕಂಪನಿಗಳ ಮೇಲಿನ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಲು ಪ್ರಯತ್ನಿಸಿದೆ. ಪ್ರತಿ ಲೀಟರ್‌ಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ 10 ರೂ. ಅಬಕಾರಿ ಸುಂಕವನ್ನು ಕಡಿತ ಮಾಡಲಾಗಿದೆ. ಈ ಸುಂಕ ಕಡಿತವಿಲ್ಲದಿದ್ದರೆ ಕಂಪನಿಗಳ ಒಟ್ಟು ನಷ್ಟವು 62,500 ಕೋಟಿ ರೂ. ದಾಟುತ್ತಿತ್ತು ಎಂದು ಅಂದಾಜಿಸಲಾಗಿದೆ.
ನಷ್ಟದಿಂದಾಗಿ ಕಂಪನಿಗಳ ನಿವ್ವಳ ಲಾಭ ಕುಸಿಯುತ್ತಿದೆ. ಉದಾಹರಣೆಗೆ ಇಂಡಿಯನ್ ಆಯಿಲ್‌ನ ನಿವ್ವಳ ಲಾಭವು ಕಳೆದ ಹಣಕಾಸು ವರ್ಷದಲ್ಲಿ 39,619 ಕೋಟಿ ರೂ. ನಿಂದ ಸುಮಾರು 12,962 ಕೋಟಿ ರೂ.ಗೆ ಇಳಿಕೆಯಾಗಿದೆ. ಇದು ಕಂಪನಿಗಳ ಭವಿಷ್ಯದ ಮೂಲಸೌಕರ್ಯ ಯೋಜನೆಗಳು ಮತ್ತು ಹೂಡಿಕೆಗಳ ಮೇಲೆ ಪರಿಣಾಮ ಬೀರಲಿದೆ.
ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಭಾರತದಲ್ಲಿ ತೈಲ ದರ ಏರಿಕೆಯಾಗದೇ ಇದ್ದರೂ ಶೀಘ್ರವೇ ದರ ಏರಿಕೆಯಾಗುವ ಸಾಧ್ಯತೆಯಿದೆ. ನಷ್ಟದ ಪ್ರಮಾಣವನ್ನು ಆಧರಿಸಿ ಮುಂದಿನ ದಿನಗಳಲ್ಲಿ ಲೀಟರ್‌ಗೆ 4 ರಿಂದ 5 ರೂ. ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.



