ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)ದಿಂದ 2026-27ನೇ ಸಾಲಿನ ಇಂಜಿನಿಯರಿಂಗ್ ಪದವೀಧರರು, ತಾಂತ್ರಿಕ ಪದವಿ, ಡಿಪ್ಲೊಮಾ ಮತ್ತು ಇತರೆ ಪದವೀಧರರಿಗೆ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಪ್ರೆಂಟಿಸ್ ತರಬೇತಿಯ ಒಟ್ಟು 200 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇಂಜಿನಿಯರಿಂಗ್ ಪದವಿ ಹೊಂದಿರುವ 80 ಹುದ್ದೆಗಳು, ಡಿಪ್ಲೊಮಾ ಪದವೀಧರರು 55 ಹಾಗೂ ಇತರೆ ಪದವಿ ಹೊಂದಿರುವ 65 ಅಪ್ರೆಂಟಿಸ್ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಲಾಗುವುದು. ಈ ಅವಧಿಯಲ್ಲಿ ಗೌರವಧನ ನೀಡಲಾಗುತ್ತದೆ.
ತರಬೇತಿಯಲ್ಲಿ ಇಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗೆ ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಹೊಂದಿರಬೇಕು. ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಪದವಿ ಪಡೆದಿರಬೇಕು. ಪದವೀಧರ ಅಪ್ರೆಂಟಿಸ್ ಹುದ್ದೆಗೆ ಬಿಕಾಂ, ಬಿಬಿಎ, ಬಿಸಿಎ, ಬಿಎ, ಬಿಎಸ್ಸಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2022, 2023, 2024, 2025 ಮತ್ತು 2026ನೇ ಸಾಲಿನಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ.
ಅಭ್ಯರ್ಥಿಗಳು ಆನ್ ಲೈನ್ ಅಪ್ಲಿಕೇಷನ್ ಸಲ್ಲಿಸಲು ಮೇ 8ರಿಂದ ಪ್ರಕ್ರಿಯೆ ಆರಂಭವಾಗಿದ್ದು, ಮೇ 29 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಚಾವಿಸನಿನಿಯ ಅಧಿಕೃತ ವೆಬ್‌ಸೈಟ್ https://cescmysore.karnataka.gov.in (ಪ್ರಕಟಣೆಗಳು/ಪ್ರಕಟಣೆಗಳು 2026-27/ನಲ್ಲಿ ಕ್ಲಿಕ್ ಮಾಡಿ) ಮಾಹಿತಿ ಪಡೆಯಬಹುದಾಗಿದೆ.



