ಗೌರಿಬಿದನೂರು : ಸರ್ಕಾರದಿಂದ ಮಂಜೂರು ಆಗುವ ನಿವೇಶನಗಳು ನಿಜವಾದ ಬಡವರು ಹಾಗೂ ನಿವೇಶನವಿಲ್ಲದ ಅರ್ಹ ಫಲಾನುಭವಿಗಳಿಗೆ ಮಾತ್ರ ದೊರೆಯಬೇಕು. ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡ ಹೇಳಿದರು.
ತಾಲೂಕಿನ ಜಿ.ಕೊತ್ತೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಯಾವುದೇ ಜಾತಿ, ಧರ್ಮ, ರಾಜಕೀಯ ಪಕ್ಷ ಅಥವಾ ಮುಖಂಡರ ಒತ್ತಡಕ್ಕೆ ಮಣಿಯದೇ, ಪ್ರತಿಯೊಬ್ಬ ನಿವೇಶನ ರಹಿತರ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಅರ್ಹರಿಗೆ ಮಾತ್ರ ನಿವೇಶನ ಮಂಜೂರು ಮಾಡಬೇಕು ಎಂದು ಸೂಚಿಸಿದರು.
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪದೋಷಗಳು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಾದ್ಯಂತ ಸುಮಾರು 176 ಏಕರೆ ಜಮೀನನ್ನು ನಿವೇಶನ ಹಂಚಿಕೆಗೆ ಗುರುತಿಸಲಾಗಿದ್ದು, ಸುಮಾರು ನಾಲ್ಕು ಸಾವಿರ ನಿವೇಶನಗಳನ್ನು ನಿವೇಶನ ರಹಿತರಿಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಗ್ರಾಮಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ಜಿಕೆ.ಹೊನ್ನಯ್ಯ, ನೋಡಲ್ ಅಧಿಕಾರಿ ವಿರೂಪಾಕ್ಷ, ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಸಿಡಿಪಿಒ ರವಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೈರೇಗೌಡ ಸೇರಿದಂತೆ ಗುಂಡ್ಲುಕೊತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಭಾಗವಹಿಸಿದ್ದರು.



