ಬೆಂಗಳೂರು : ಹಿಂದೂಗಳು ಅವರ ನಂಬಿಕೆ, ಆಚರಣೆ, ಧಾರ್ಮಿಕ ಚಿಹ್ನೆಗಳೆಂದರೆ ನಿಮಗೆ ಯಾಕೆ ಇಷ್ಟು ಅಸಹನೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಹಿಂದೂಗಳೆಂದರೆ, ಅವರ ನಂಬಿಕೆಗಳು, ಆಚರಣೆಗಳು ಮತ್ತು ಧಾರ್ಮಿಕ ಚಿಹ್ನೆಗಳೆಂದರೆ ಸಿದ್ದರಾಮಯ್ಯ ಅವರಿಗೆ ಏಕೆ ದ್ವೇಷ?” ಎಂದು ಪ್ರಶ್ನಿಸಿ ಟೀಕಿಸಿದ್ದಾರೆ.
ಅಲ್ಲದೆ ನೀವು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ, ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಸಿರುವ ಅವರು, ತಿಲಕ ಕಂಡರೆ ನಡುಕ, ಕೇಸರಿ ಕಂಡರೆ ಅಸಹನೆ, ಹನುಮ ಧ್ವಜ ಕಂಡರೆ ತಳಮಳ, ರಾಮಮಂದಿರ ಎಂದರೆ ಕಿರಿಕಿರಿ ಎಂಬ ರೀತಿಯಲ್ಲಿ ವರ್ತಿಸುತ್ತೀರಿ ಎಂದು ಆರೋಪಿಸಿದ್ದಾರೆ.
ಅನ್ಯಮತೀಯ ಕಾರ್ಯಕ್ರಮಗಳಲ್ಲಿ ಮಾತ್ರ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತೀರಿ ಎಂದು ಕುಹಕವಾಡಿದ ಅವರು, ಈ ನಡೆ ರಾಜಕೀಯವಾಗಿ ಸಮನ್ವಯದ ಬದಲು ವಿಭಜನೆಗೆ ಕಾರಣವಾಗುತ್ತಿದೆ ಎಂದು ಟೀಕಿಸಿದ್ದಾರೆ.



