ಚಿಕ್ಕಬಳ್ಳಾಪುರ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಜನ್ಮದಿನವನ್ನು ಜೆಡಿಎಸ್ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ವಿಭಿನ್ನವಾಗಿ ಆಚರಿಸಿ ಗಮನ ಸೆಳೆದರು. ಅಲ್ಲದೆ ದೇವೇಗೌಡರು ಶತಾಯುಷಿಗಳಾಗಲಿ ಹಾಗೂ ಅವರ ಸೇವೆ ದೇಶಕ್ಕೆ ಇನ್ನಷ್ಟು ಕಾಲ ದೊರೆಯಲಿ ಎಂದು ಹಾರೈಸಿ ದೇವಾಲಯಗಳಲ್ಲಿ ವಿಶೇಷ ಪೂಜೆ, ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಲ್ಲಿ ಅನ್ನದಾನ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು.
ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಬಲಮುರಿ ಗಣಪತಿ ದೇವಾಲಯದಲ್ಲಿ ವಕೀಲ ಆರ್.ಮಟಮಪ್ಪ ಅವರು ವಿಶೇಷ ಅಭಿಷೇಕ ಪೂಜೆ ಸಲ್ಲಿಸಿ, ಬಳಿಕ ಭಕ್ತರು ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಸಿಹಿ ಹಂಚಿದರು.
ಈ ವೇಳೆ ಮಾತನಾಡಿದ ಅವರು, ದೇವೇಗೌಡರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ವಿಶಿಷ್ಟ ಹೆಸರು ಮಾಡಿದ ನಾಯಕರು. ಅವರ ಮಾರ್ಗದರ್ಶನದಲ್ಲಿ ಬೆಳೆದ ಅನೇಕರು ಮುಖ್ಯಮಂತ್ರಿ ಹುದ್ದೆಯವರೆಗೂ ಏರಿದ್ದಾರೆ ಎಂದರು.
ಇನ್ನು ಜಿಲ್ಲಾ ಜೆಡಿಎಸ್ ವತಿಯಿಂದ ನಗರದ ಹೊರವಲಯದಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ, 101 ತೆಂಗಿನಕಾಯಿ ಒಡೆದು, ಕೇಕ್ ಕತ್ತರಿಸಿ ಅನ್ನಸಂತರ್ಪಣೆ ಮಾಡುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಳಿಕ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ಮಾತನಾಡಿ, ಮಣ್ಣಿನ ಮಗ ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ವ್ಯಕ್ತಿತ್ವ ಮತ್ತು ರಾಜಕೀಯ ಜೀವನ ಅನೇಕರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ದೇವೇಗೌಡರ ಸುದೀರ್ಘ ರಾಜಕೀಯ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದ ಅವರು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರಲ್ಲದೆ ಜೊತೆಗೆ, ದೇವೇಗೌಡರ ರಾಜ್ಯಸಭಾ ಸದಸ್ಯತ್ವ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕೆ.ಆರ್.ರೆಡ್ಡಿ, ನರಸಿಂಹಮೂರ್ತಿ, ಶಾಂತಮೂರ್ತಿ, ಬಂಡ್ಲು ಶ್ರೀನಿವಾಸ್, ಅಖಿಲ್ ರೆಡ್ಡಿ, ಸ್ಟುಡಿಯೋ ಮಂಜು, ಅಮರ್, ಜಫರುಲ್ಲಾ, ಸಾಧಿಕ್, ಕುಮಾರ್, ನಾಗರಾಜ್, ಜಾತವಾರ ಜಗದೀಶ್, ಲಕ್ಷ್ಮಿ ನರಸಪ್ಪ, ಮಾರೆಗೌಡ, ಪ್ರಭಾ ನಾರಾಯಣಗೌಡ, ಅರುಣ, ಸುನಿತ ಸೇರಿದಂತೆ ಹಲವರು ಉಪಸ್ಥಿತರಿದ್ದರು.



