ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ನಡೆಯಬೇಕಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಮಹತ್ವದ ತಿರುವು ಸಿಕ್ಕಿದೆ.
ಶೇ.25ರಷ್ಟು ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ ಮುಷ್ಕರಕ್ಕೂ ಮುನ್ನವೇ ಜಂಟಿ ಕ್ರಿಯಾ ಸಮಿತಿಯೊಳಗೆ ಭಿನ್ನಮತ ಉಂಟಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಜಗದೀಶ್ ನೇತೃತ್ವದ ಕೆಎಸ್‌ಆರ್‌ಟಿಸಿ ನೌಕರರ ಸಂಘವು ತನ್ನ ಬೆಂಬಲವನ್ನು ಹಿಂಪಡೆಯಲು ತೀರ್ಮಾನಿಸಿದೆ ಎನ್ನಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಜಂಟಿ ಕ್ರಿಯಾ ಸಮಿತಿಗೆ ಬೆಂಬಲವಾಗಿ ನಿಂತಿದ್ದ ಸಂಘ, ಈ ಬಾರಿ ಹಿಂದೆ ಸರಿದಿರುವುದು ಗಮನಾರ್ಹವಾಗಿದೆ. ಈ ಬೆಳವಣಿಗೆ ಮುಷ್ಕರದ ತೀವ್ರತೆ ಮತ್ತು ಪರಿಣಾಮದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.



