Wednesday, May 20, 2026
Google search engine

Homeಸ್ಥಳೀಯಪಿಂಚಣಿದಾರರ ತುಟ್ಟಿ ಭತ್ಯೆ ತಡೆ ಖಂಡಿಸಿ ಪ್ರತಿಭಟನೆ

ಪಿಂಚಣಿದಾರರ ತುಟ್ಟಿ ಭತ್ಯೆ ತಡೆ ಖಂಡಿಸಿ ಪ್ರತಿಭಟನೆ


ಮೈಸೂರು: ಕೇಂದ್ರ ಸರ್ಕಾರವು ಬಿಎಸ್‌ಎನ್‌ಎಲ್ ಪಿಂಚಣಿದಾರರಿಗೆ ಜನವರಿ 1 ರಿಂದ ಕೊಡಬೇಕಿರುವ ತುಟ್ಟಿ ಭತ್ಯೆಯನ್ನು ತಡೆಹಿಡಿದಿರುವುದನ್ನು ಖಂಡಿಸಿ ಜಯಲಕ್ಷ್ಮೀಪುರಂ ನಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಬಿಎಸ್‌ಎನ್‌ಎಲ್ ಪಿಂಚಣಿದಾರರ ಜಂಟಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಫೆ.೨೭ರಂದು ಸಾರ್ವಜನಿಕ ಉದ್ಯಮಗಳ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಇನ್ನು ಮುಂದೆ ತುಟ್ಟಿ ಭತ್ಯೆ ಕೊಡುವ ನಿರ್ಧಾರವನ್ನು ಆಯಾ ಇಲಾಖೆಗಳ ಹಣಕಾಸಿನ ಪರಿಸ್ಥಿತಿಯನ್ನು ಪರಿಗಣಿಸಿ, ಇಲಾಖೆ ಮುಖ್ಯಸ್ಥರ ವಿವೇಚನೆಗೆ ಬಿಟ್ಟಿರುವ ವಿಚಾರದಲ್ಲಿ ಬಿಎಸ್‌ಎನ್‌ಎಲ್ ಪಿಂಚಣಿದಾರರನ್ನು ಈ ಆದೇಶದಿಂದ ಹೊರಗಿಡುವಂತೆ ಒತ್ತಾಯಿಸಲಾಗಿತ್ತು. ಆದರೆ, ಆ ನಿಯಮವನ್ನು ಅಳವಡಿಸಿರುವ ಹಿನ್ನೆಲೆಯಲ್ಲಿ ಜ.1ರಿಂದ ಕೊಡಬೇಕಿರುವ ತುಟ್ಟಿ ಭತ್ಯೆಯನ್ನು ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ದೂರ ಸಂಪರ್ಕ ಇಲಾಖೆ ಸೇವೆಯಿಂದ ಬಿಎಸ್‌ಎನ್‌ಎಲ್‌ಗೆ ಅಭಿಯುಕ್ತಿಗೊಂಡ ನೌಕರರು, ನಿವೃತ್ತಿಯ ನಂತರ ಕೇಂದ್ರ ಸರ್ಕಾರದ ಪಿಂಚಣಿದಾರರೆಂದು ಪರಿಗಣಿಸುವುದಾಗಿ ಸಂಸ್ಥೆ ಸ್ಥಾಪನೆಯಾದ ವರ್ಷದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನವಾಗಿರುತ್ತದೆ ಮತ್ತು ಅವರ ಪಿಂಚಣಿ ಮತ್ತು ತುಟ್ಟಿ ಭತ್ಯೆಯನ್ನು ನೌಕರರು ಸೇವೆಯಲ್ಲಿದ್ದಾಗ ವಂತಿಗೆ ರೂಪದಲ್ಲಿ ಕೊಟ್ಟಿರುವ ಸಂಚಿತ ನಿಧಿಯಿಂದ ಕೊಡಲ್ಪಡುತ್ತದೆಯೇ ವಿನಃ ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಯಾದ ಬಿಎಸ್‌ಎನ್‌ಎಲ್‌ನಿಂದ ಪಿಂಚಣಿ ಕೊಡುವುದಿಲ್ಲ. ಆದ ಕಾರಣ ಸಂಸ್ಥೆಯ ಲಾಭ-ನಷ್ಯದ ಆಧಾರದ ಮೇಲೆ, ಬಿಎಸ್‌ಎನ್‌ಎಲ್ ಪಿಂಚಣಿದಾರರ ತುಟ್ಟಿ ಭತ್ಯೆ ತಡೆಹಿಡಿಯುವುದು ಅನೈತಿಕ ಮತ್ತು ಅಸಂಬದ್ಧವಾಗಿರುತ್ತದೆ ಎಂದರು.
ಕಳೆದ ಬಾರಿ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ಭತ್ಯೆ ನೀಡುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, ಈವರೆಗೂ ಪಿಂಚಣಿದಾರರಿಗೆ ಜನವರಿ 1 ರಿಂದ ಕೊಡಬೇಕಿರುವ ತುಟ್ಟಿ ಭತ್ಯೆಯನ್ನು ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ವಿಷಕಂಠಮೂರ್ತಿ, ರಾಜಶೇಖರ್, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular