Wednesday, May 27, 2026
Google search engine

Homeದೇಶಭಾರತ-ಕೆನಡಾ ಸಂಬಂಧಗಳ ಮುಂದಿನ ಹಂತವು ವಿಶ್ವಾಸ, ಹಂಚಿಕೆಯ ಸಮೃದ್ಧಿಯ ಮೇಲೆ ಆಧಾರಿತ: ಪಿಯೂಷ್ ಗೋಯಲ್

ಭಾರತ-ಕೆನಡಾ ಸಂಬಂಧಗಳ ಮುಂದಿನ ಹಂತವು ವಿಶ್ವಾಸ, ಹಂಚಿಕೆಯ ಸಮೃದ್ಧಿಯ ಮೇಲೆ ಆಧಾರಿತ: ಪಿಯೂಷ್ ಗೋಯಲ್

ಟೊರೊಂಟೊ: ಭಾರತ ಮತ್ತು ಕೆನಡಾ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳ ಮುಂದಿನ ಹಂತವು ಪರಸ್ಪರ ವಿಶ್ವಾಸ ಮತ್ತು ಹಂಚಿಕೆಯ ಸಮೃದ್ಧಿಯ ಮೇಲೆ ಆಧಾರಿತವಾಗಿರುತ್ತದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆನಡಾದ ಟೊರೊಂಟೊದಲ್ಲಿ ಆಯೋಜಿಸಲಾಗಿದ್ದ ‘ಫ್ರಮ್ ಪೊಲಿಟಿಕಲ್ ರಿಸೆಟ್ ಟು ಕಮರ್ಷಿಯಲ್ ಡೆಲಿವರಿ’ (From Political Reset to Commercial Delivery) ಎಂಬ ಮಂತ್ರಿಮಟ್ಟದ ಪೂರ್ಣ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕೆನಡಾದ ಉದ್ಯಮ ರಂಗ ಮತ್ತು ಹೂಡಿಕೆದಾರರನ್ನು ಭಾರತದ ಅಭಿವೃದ್ಧಿಯ ಪಯಣದಲ್ಲಿ ಸಕ್ರಿಯ ಪಾಲುದಾರರಾಗುವಂತೆ ಅವರು ಮುಕ್ತ ಆಹ್ವಾನ ನೀಡಿದರು. ಈ ಕಾರ್ಯಕ್ರಮದಲ್ಲಿ ಕೆನಡಾದ ಅಂತರರಾಷ್ಟ್ರೀಯ ವ್ಯಾಪಾರ ಸಚಿವ ಮನೀಂದರ್ ಸಿಧು ಕೂಡ ಉಪಸ್ಥಿತರಿದ್ದರು.

ಸುಲಭ ವಾಣಿಜ್ಯ ವಹಿವಾಟಿಗೆ ಒತ್ತು

ಭಾರತದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಹೂಡಿಕೆದಾರರಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಭಾರತ ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳ ಕುರಿತು ಪಿಯೂಷ್ ಗೋಯಲ್ ಬೆಳಕು ಚೆಲ್ಲಿದರು. ಭಾರತ ಮತ್ತು ಕೆನಡಾ ನಡುವಿನ ಸಮಗ್ರ ಆರ್ಥಿಕ ಪಾಲುದಾರಿ ಒಪ್ಪಂದವು (CEPA) ಉಭಯ ದೇಶಗಳ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಬಲಪಡಿಸುವುದಲ್ಲದೆ, ವಿವಿಧ ವಲಯಗಳಲ್ಲಿ ಸಹಕಾರದ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಅವರು ತಿಳಿಸಿದರು.

ಐತಿಹಾಸಿಕ ವ್ಯಾಪಾರ ನಿಯೋಗದ ನೇತೃತ್ವ

ವಾಣಿಜ್ಯ ಸಚಿವಾಲಯದ ಮಾಹಿತಿ ಪ್ರಕಾರ, ಒಟ್ಟಾವಾದಲ್ಲಿ ನಡೆದ ಉನ್ನತ ಮಟ್ಟದ ವ್ಯಾಪಾರ ಮಾತುಕತೆಗಳ ನಂತರ, ಪಿಯೂಷ್ ಗೋಯಲ್ ಅವರು ಟೊರೊಂಟೊದಲ್ಲಿ ನಡೆದ ಉದ್ಯಮ ದುಂಡುಮೇಜಿನ ಸಭೆಗಳು ಮತ್ತು ಬಿ2ಬಿ (B2B) ಕಾರ್ಯಕ್ರಮಗಳಲ್ಲಿ ಭಾರತೀಯ ವ್ಯಾಪಾರ ನಿಯೋಗದ ನೇತೃತ್ವ ವಹಿಸಿದ್ದರು. ಈ ಪ್ರವಾಸದಲ್ಲಿ ಅವರು 100 ಕ್ಕೂ ಹೆಚ್ಚು ಕಂಪನಿಗಳ ಉದ್ಯಮ ಪ್ರತಿನಿಧಿಗಳನ್ನೊಳಗೊಂಡ, ಇದುವರೆಗೆ ಭಾರತದಿಂದ ಕೆನಡಾಕ್ಕೆ ಭೇಟಿ ನೀಡಿದ ಅತಿ ದೊಡ್ಡ ವ್ಯಾಪಾರ ನಿಯೋಗ ಮುನ್ನಡೆಸುತ್ತಿರುವುದು ವಿಶೇಷವಾಗಿದೆ.

2030ರ ವೇಳೆಗೆ $50 ಬಿಲಿಯನ್ ವ್ಯಾಪಾರದ ಗುರಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರ ನಡುವೆ ಮಾರ್ಚ್ 2026 ರಲ್ಲಿ ನಡೆದ ಸಭೆಯಲ್ಲಿ ರೂಪಿಸಲಾದ ಕಾರ್ಯತಂತ್ರದ ದಿಕ್ಕನ್ನು ಮುಂದುವರಿಸುವ ಭಾಗವಾಗಿ ಸಚಿವ ಗೋಯಲ್ ಅವರ ಈ ಪ್ರವಾಸ ಆಯೋಜನೆಗೊಂಡಿದೆ. ಸದ್ಯ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ವ್ಯಾಪಾರವು ಸುಮಾರು 8.5 ಬಿಲಿಯನ್ ಡಾಲರ್‌ಗಳಷ್ಟಿದ್ದು, ಇದನ್ನು 2030 ರ ವೇಳೆಗೆ 50 ಬಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಉಭಯ ದೇಶಗಳು ಹೊಂದಿವೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular