ಚಾಮರಾಜನಗರ : ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ರವರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ 2026 ಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ರವೀಂದ್ರ ಬಾದಾಮಿಕರ್, ಚಂದನ ದೂರದರ್ಶನದ ಹೆಚ್ಚುವರಿ ಮಾಜಿ ನಿರ್ದೇಶಕ ಮಹೇಶ್ ಜೋಶಿ, ವಿದ್ವಾಂಸರಾದ ಅರಳುಮಲ್ಲಿಗೆಡಾ.ಪಾರ್ಥಸಾರಥಿ, ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ಎಚ್ಎಲ್ ಎನ್ ರಾವ್ ವಿತರಿಸಿ ಗೌರವಿಸಿ ಸನ್ಮಾನಿಸಿದರು.
ಸುರೇಶ್ ಎನ್ ಋಗ್ವೇದಿ , ಚಾಮರಾಜನಗರದ ಶಂಕರ ಪುರ ನಿವಾಸಿ. ತಂದೆ ಎಸ್ ನಾಗರಾಜು,ತಾಯಿ ಸುಲೋಚನಮ್ಮ ಪುತ್ರರು. ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿ ಎಂಎ ಇತಿಹಾಸ, ಬಿ ಎಡ್ ಪದವಿ ಹಾಗೂ ಡಿಪ್ಲೋಮಾ ಇನ್ ಜರ್ನಲಿಸಂ ಶಿಕ್ಷಣ ಪಡೆದು ಹ ರದನಹಳ್ಳಿ ಪ್ರೌಢಶಾಲೆಯಲ್ಲಿ 13 ವರ್ಷ ಸೇವೆ ಸಲ್ಲಿಸಿ, ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರವಾಗಿ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಋಗ್ವೇದಿಯವರು ಅಪಾರ ಶಿಷ್ಯರನ್ನು ಹೊಂದಿದ್ದಾರೆ. ಶಿಕ್ಷಣ,ಆಧ್ಯಾತ್ಮಿಕ, ಸಾಹಿತ್ಯ, ಸಂಸ್ಕೃತಿ ಪರಂಪರೆ, ರಾಷ್ಟ್ರೀಯತೆ, ಕನ್ನಡ ನೆಲ ಜಲ ಭಾಷೆ ಹಾಗೂ ನಿರಂತರ ಕಾರ್ಯಕ್ರಮಗಳ ಸಂಘಟನೆಯ ಮೂಲಕ ನಿತ್ಯ ಹೆಸರಾಗಿದ್ದಾರೆ.
ಮೈಸೂರಿನಲ್ಲಿ ಚಾಮರಾಜನಗರ ವಿದ್ಯಾರ್ಥಿ ಬಳಗ ಸ್ಥಾಪನೆ ಮಾಡುವ ಮೂಲಕ ಸಂಘಟನೆಯನ್ನು ಆರಂಭಿಸಿದ ಋಗ್ವೇದಿಯವರು ನಿರಂತರವಾಗಿ 34 ವರ್ಷಗಳಿಂದ ಸಂಘಟನೆಗಳಲ್ಲಿ ಸೇವೆಯನ್ನು ಸಲ್ಲಿಸುವ ಮೂಲಕ ವಿಕಾಸ ವೇದಿಕೆ, ಕನ್ನಡ ಶಕ್ತಿ ಕೇಂದ್ರ,ಕನ್ನಡ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಜೈ ಹಿಂದ್ ಪ್ರತಿಷ್ಠಾನ,ಶ್ರೀ ಕೃಷ್ಣ ಪ್ರತಿಷ್ಠಾನ,ಋಗ್ವೇದಿ ಯೂತ್ ಕ್ಲಬ್ ಮುಂತಾದ ಸಂಘ ಸಂಸ್ಥೆಗಳ ಮೂಲಕ ಸಾವಿರಾರು ಕಾರ್ಯಕ್ರಮಗಳನ್ನು ರೂಪಿಸಿ ನಿರಂತರವಾಗಿ ಜಾಗೃತಿಯ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ.
ಇವರ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಕಳೆದ 51 ವರ್ಷಗಳಿಂದ ನಿರಂತರವಾಗಿ ನೀಡಲ್ಪಡುತ್ತಿರುವ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ 2020 ನೀಡಿ ಗೌರವಿಸಿದೆ.



