ರಾಮನಗರ: ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭಕ್ಕೆ ರಾಮನಗರ ಜಿಲ್ಲೆಯಲ್ಲಿ ಭಾರೀ ಸಿದ್ಧತೆಗಳು ಆರಂಭವಾಗಿವೆ. ಹೈಕಮಾಂಡ್ ಮಟ್ಟದಲ್ಲಿ ಚಟುವಟಿಕೆಗಳು ವೇಗ ಪಡೆದಿರುವ ಹಿನ್ನೆಲೆ, ಪದಗ್ರಹಣ ಕಾರ್ಯಕ್ರಮಕ್ಕೆ ರಾಮನಗರ ಜಿಲ್ಲೆಯಿಂದಲೇ 40 ರಿಂದ 50 ಸಾವಿರ ಜನರನ್ನು ಬೆಂಗಳೂರಿಗೆ ಕರೆದೊಯ್ಯಲು ಕಾಂಗ್ರೆಸ್ ನಾಯಕರು ತಯಾರಿ ನಡೆಸಿದ್ದಾರೆ.
ಈ ಕುರಿತು ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಜನರನ್ನು ಸುರಕ್ಷಿತವಾಗಿ ಕರೆದೊಯ್ಯುವ ವ್ಯವಸ್ಥೆಗಳ ಕುರಿತು ಚರ್ಚಿಸಲಾಯಿತು.
ಬಳಿಕ ಮಾತನಾಡಿದ ಅವರು, “ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವುದು ರಾಮನಗರ ಜಿಲ್ಲೆಯ ಜನರ ಕನಸು. ಈಗ ಆ ಕ್ಷಣ ಸಮೀಪಿಸಿದೆ. ಕಾರ್ಯಕ್ರಮಕ್ಕೆ ಬಸ್ಸು, ವಾಹನ ಹಾಗೂ ಊಟ-ತಿಂಡಿಯ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ” ಎಂದು ತಿಳಿಸಿದರು.



