Friday, June 5, 2026
Google search engine

Homeದೇಶಟ್ರಂಪ್ ಭರವಸೆ : ಭಾರತ-ಅಮೆರಿಕ ನಡುವೆ ಶೀಘ್ರದಲ್ಲೇ ವ್ಯಾಪಾರ ಒಪ್ಪಂದ; ಪಿಎಂ ಮೋದಿ 'ಆಪ್ತ ಸ್ನೇಹಿತ'...

ಟ್ರಂಪ್ ಭರವಸೆ : ಭಾರತ-ಅಮೆರಿಕ ನಡುವೆ ಶೀಘ್ರದಲ್ಲೇ ವ್ಯಾಪಾರ ಒಪ್ಪಂದ; ಪಿಎಂ ಮೋದಿ ‘ಆಪ್ತ ಸ್ನೇಹಿತ’ ಎಂದು ಶ್ಲಾಘನೆ

ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ “ಆಪ್ತ ಸ್ನೇಹಿತ” ಎಂದು ಬಣ್ಣಿಸಿದ್ದು, ಭಾರತ ಮತ್ತು ಅಮೆರಿಕ ನಡುವೆ ಶೀಘ್ರದಲ್ಲೇ ವ್ಯಾಪಾರ ಒಪ್ಪಂದ (Trade Deal) ಏರ್ಪಡಬಹುದು ಎಂದು ಹೇಳಿದ್ದಾರೆ. ವೈಟ್‌ ಹೌಸ್‌ನಲ್ಲಿ ಕಲ್ಲಿದ್ದಲು ಮತ್ತು ಇಂಧನ ನೀತಿಯ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಭಾರತದ ಸುಂಕ (ಟ್ಯಾರಿಫ್) ವ್ಯವಸ್ಥೆಯನ್ನು ದೀರ್ಘಕಾಲದಿಂದ ಟೀಕಿಸುತ್ತಾ ಬಂದಿದ್ದರೂ, ಪ್ರಸ್ತುತ ಎರಡೂ ದೇಶಗಳ ನಡುವಿನ ವ್ಯಾಪಾರ ಮಾತುಕತೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಇತ್ತೀಚೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ (Secratary of State) ಮಾರ್ಕೊ ರೂಬಿಯೋ ಅವರ ಭಾರತ ಪ್ರವಾಸದ ಬೆನ್ನಲ್ಲೇ, ಎರಡೂ ದೇಶಗಳು ವ್ಯಾಪಾರ ಒಪ್ಪಂದದ ಹತ್ತಿರಕ್ಕೆ ಬಂದಿವೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಹೌದು, ನಾವು ಈ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದೇವೆ” ಎಂದರು.

“ನಾವು ಒಪ್ಪಂದವನ್ನು ಮಾಡಿಕೊಳ್ಳಲಿದ್ದೇವೆ, ಏಕೆಂದರೆ ನನಗೆ ನಿಮ್ಮ ಪ್ರಧಾನಿ ಎಂದರೆ ತುಂಬಾ ಇಷ್ಟ. ಅವರು ನನ್ನ ಉತ್ತಮ ಸ್ನೇಹಿತ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ ಮತ್ತು ನಾವು ಒಪ್ಪಂದಕ್ಕೆ ಬರಲಿದ್ದೇವೆ. ನಮ್ಮ ಸಂಬಂಧಗಳು ಅತ್ಯಂತ ಗಟ್ಟಿಯಾಗಿವೆ,” ಎಂದು ಟ್ರಂಪ್ ಹೇಳಿದರು.

ಭಾರತದ ಟ್ಯಾರಿಫ್ ನೀತಿಯ ಬಗ್ಗೆ ಹಳೆಯ ಅಸಮಾಧಾನದ ಪ್ರಸ್ತಾಪ

ಇದೇ ಸಂದರ್ಭದಲ್ಲಿ ಟ್ರಂಪ್ ಅವರು ಅಮೆರಿಕನ್ ಉತ್ಪನ್ನಗಳ ಮೇಲೆ ಭಾರತವು ಭಾರಿ ಪ್ರಮಾಣದ ಸುಂಕವನ್ನು ವಿಧಿಸುತ್ತಿದೆ ಎಂಬ ತಮ್ಮ ಹಳೆಯ ದೂರನ್ನು ಮತ್ತೊಮ್ಮೆ ಉಲ್ಲೇಖಿಸಿದರು. “ಭಾರತವು ಹಲವು ವರ್ಷಗಳ ಕಾಲ ಅಮೆರಿಕದ ಲಾಭವನ್ನು ಪಡೆದುಕೊಂಡಿದೆ. ಅವರು ನಮ್ಮಿಂದ ಭಾರಿ ಪ್ರಮಾಣದ ಸುಂಕವನ್ನು ವಸೂಲಿ ಮಾಡುತ್ತಿದ್ದರು, ಆದರೆ ನಮಗೆ ಪ್ರತಿಯಾಗಿ ಏನನ್ನೂ ನೀಡುತ್ತಿರಲಿಲ್ಲ,” ಎಂದು ಹೇಳಿದರು.

ಇದಕ್ಕೆ ಉದಾಹರಣೆಯಾಗಿ ಹಾರ್ಲೆ-ಡೇವಿಡ್ಸನ್ (Harley-Davidson) ಮೋಟಾರ್‌ಸೈಕಲ್‌ಗಳನ್ನು ಉಲ್ಲೇಖಿಸಿದ ಅವರು, ಈ ಹಿಂದೆ ಭಾರಿ ಆಮದು ಸುಂಕದ ಕಾರಣದಿಂದಾಗಿ ಅಮೆರಿಕದ ಕಂಪನಿಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದು ಕಷ್ಟಕರವಾಗಿತ್ತು ಎಂದರು.

“ಹಿಂದೆ ಭಾರತವು ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಮೇಲೆ ಶೇಕಡಾ 200 ರಷ್ಟು ಟ್ಯಾರಿಫ್ ವಿಧಿಸುತ್ತಿತ್ತು.”

“ಇದರಿಂದಾಗಿ ಕಂಪನಿಗೆ ಅಲ್ಲಿ ವ್ಯಾಪಾರ ನಡೆಸುವುದು ಕಷ್ಟವಾಯಿತು. ಅಂತಿಮವಾಗಿ ಹಾರ್ಲೆ-ಡೇವಿಡ್ಸನ್ ಭಾರತದಲ್ಲೇ ತನ್ನದೇ ಆದ ಪ್ಲಾಂಟ್‌ಗಳನ್ನು ಸ್ಥಾಪಿಸಬೇಕಾಯಿತು.”

ಹಿಂದಿನ ವ್ಯಾಪಾರ ವ್ಯವಸ್ಥೆಗಳಿಗೂ ಮತ್ತು ತಮ್ಮ ಸರ್ಕಾರದ ಪ್ರಸ್ತುತ ನೀತಿಗೂ ದೊಡ್ಡ ವ್ಯತ್ಯಾಸವಿದೆ ಎಂದು ಪ್ರತಿಪಾದಿಸಿದ ಟ್ರಂಪ್, “ಅವರು ನಮ್ಮ ಉತ್ಪನ್ನಗಳ ಮೇಲೆ ಭಾರಿ ಟ್ಯಾರಿಫ್ ವಿಧಿಸುತ್ತಿದ್ದರು ಮತ್ತು ನಾವು ಅವರಿಂದ ಏನನ್ನೂ ಪಡೆಯುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ ಮತ್ತು ನಾವು ಭಾರತದೊಂದಿಗಿನ ವ್ಯಾಪಾರದಿಂದ ಉತ್ತಮ ಗಳಿಕೆ ಮಾಡುತ್ತಿದ್ದೇವೆ,” ಎಂದರು.

ಮಾರುಕಟ್ಟೆ ಪ್ರವೇಶ ಸುಲಭವಾಗುವ ನಿರೀಕ್ಷೆ

ವಾಷಿಂಗ್ಟನ್ ಮತ್ತು ನವದೆಹಲಿಯಲ್ಲಿ ಎರಡೂ ದೇಶಗಳ ರಾಜತಾಂತ್ರಿಕರು ವ್ಯಾಪಾರ ಒಪ್ಪಂದಕ್ಕೆ ಹತ್ತಿರವಾಗುತ್ತಿದ್ದಾರೆ ಎಂಬ ಭರವಸೆ ಮೂಡಿರುವ ಬೆನ್ನಲ್ಲೇ ಟ್ರಂಪ್ ಅವರ ಈ ಹೇಳಿಕೆ ಹೊರಬಿದ್ದಿದೆ. ಈ ಒಪ್ಪಂದದಿಂದಾಗಿ ಮಾರುಕಟ್ಟೆ ಪ್ರವೇಶ ಸುಲಭವಾಗಲಿದ್ದು, ಟ್ಯಾರಿಫ್‌ಗೆ ಸಂಬಂಧಿಸಿದ ಹಲವು ವಿವಾದಗಳು ಬಗೆಹರಿಯಲಿವೆ ಎನ್ನಲಾಗಿದೆ.

ಪ್ರಸ್ತುತ ಭಾರತ-ಅಮೆರಿಕ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ವ್ಯಾಪಾರವು ಅತ್ಯಂತ ಪ್ರಮುಖ ಕ್ಷೇತ್ರವಾಗಿದೆ. ರಕ್ಷಣೆ, ತಂತ್ರಜ್ಞಾನ, ಇಂಧನ ಮತ್ತು ಪ್ರಮುಖ ಪೂರೈಕೆ ಸರಪಳಿ (Supply Chain) ಕ್ಷೇತ್ರಗಳಲ್ಲಿನ ಸಹಕಾರದ ಜೊತೆಗೆ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ಎರಡೂ ಸರ್ಕಾರಗಳು ನಿರಂತರವಾಗಿ ಒತ್ತು ನೀಡುತ್ತಾ ಬಂದಿವೆ.

ಮೋದಿ-ಟ್ರಂಪ್ ವೈಯಕ್ತಿಕ ಬಾಂಧವ್ಯ

ಟ್ರಂಪ್ ಅವರ ಮಾತುಗಳಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ವೈಯಕ್ತಿಕ ಬಾಂಧವ್ಯದ ಝಲಕ್ ಮತ್ತೊಮ್ಮೆ ಕಂಡುಬಂದಿದೆ. ಟ್ರಂಪ್ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲೂ ಮೋದಿ ಅವರೊಂದಿಗಿನ ಸ್ನೇಹವನ್ನು ಹಲವು ಬಾರಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಇಬ್ಬರೂ ನಾಯಕರು ಹೂಸ್ಟನ್‌ನಲ್ಲಿ ನಡೆದ “ಹೌಡಿ ಮೋದಿ” (Howdy Modi) ಮತ್ತು ಅಹಮದಾಬಾದ್‌ನಲ್ಲಿ ನಡೆದ “ನಮಸ್ತೆ ಟ್ರಂಪ್” (Namaste Trump) ನಂತಹ ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

RELATED ARTICLES
- Advertisment -
Google search engine

Most Popular