ಬೆಂಗಳೂರು: ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ರಾಜಕೀಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸೂರಜ್ ಹೆಗ್ಡೆ ಅವರ ಅಗಲಿಕೆ ಸುದ್ದಿ ಆಘಾತ ಉಂಟುಮಾಡಿದೆ ಎಂದು ತಿಳಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಚಿಕ್ಕ ವಯಸ್ಸಿನಲ್ಲೇ ಅವರು ನಮ್ಮನ್ನಗಲಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ತಮಿಳುನಾಡು ಮತ್ತು ಪುದುಚೆರಿ ಉಸ್ತುವಾರಿಯಾಗಿ ಎಐಸಿಸಿ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಕಾಂಗ್ರೆಸ್ ಪಕ್ಷಕ್ಕೆ ಮಹತ್ವದ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದ್ದಾರೆ.
ಹಿಂದುಳಿದ ವರ್ಗಗಳು, ಕಾರ್ಮಿಕರ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿದ್ದ ಸೂರಜ್ ಹೆಗ್ಡೆ ಅವರು ತಮ್ಮ ತಾತ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಆದರ್ಶಗಳನ್ನು ಮುಂದುವರಿಸಿಕೊಂಡು ಬಂದಿದ್ದರು. ರಾಷ್ಟ್ರೀಯ ಯುವ ಕಾಂಗ್ರೆಸ್‌ನಿಂದ ರಾಜಕೀಯ ಪಯಣ ಆರಂಭಿಸಿದ್ದ ಅವರು ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಡಿಕೆಶಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೂರಜ್ ಹೆಗ್ಡೆ ಕಾಂಗ್ರೆಸ್‌ನ ನಿಷ್ಠಾವಂತ ಯುವ ನಾಯಕರಾಗಿದ್ದು, ರಾಷ್ಟ್ರಮಟ್ಟದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು ಎಂದು ಹೇಳಿದ್ದಾರೆ. ಜನಪರ ರಾಜಕಾರಣದ ಪರಂಪರೆಯನ್ನು ಬದ್ಧತೆಯಿಂದ ಮುಂದುವರಿಸಿಕೊಂಡು ಬಂದಿದ್ದ ಅವರಿಗೆ ರಾಜಕೀಯದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ದೊರಕಬೇಕಾಗಿತ್ತು. ಅವರ ನಿಧನ ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕಕ್ಕೆ ತುಂಬಲಾರದ ನಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಸೂರಜ್ ಹೆಗ್ಡೆ ಅವರನ್ನು ಬಾಲ್ಯದಿಂದಲೇ ನೋಡಿದ್ದೇನೆ. ದೇವರಾಜ ಅರಸು ಅವರ ಮೊಮ್ಮಗನಾಗಿದ್ದರೂ ಯಾವುದೇ ಅಹಂಕಾರವಿಲ್ಲದೆ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿ ಎಐಸಿಸಿ ಮಟ್ಟದ ನಾಯಕರಾಗಿ ಬೆಳೆದಿದ್ದರು ಎಂದು ಸ್ಮರಿಸಿದರು. ರಾಹುಲ್ ಗಾಂಧಿಗೆ ಆಪ್ತರಾಗಿದ್ದ ಅವರು ಪಕ್ಷಕ್ಕೆ ಅಪಾರ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಸೂರಜ್ ಹೆಗ್ಡೆ ಅವರನ್ನು ತಮ್ಮ ಸಹೋದರನಂತೆ ಆತ್ಮೀಯರಾಗಿದ್ದವರು ಎಂದು ಬಣ್ಣಿಸಿ, ಅವರ ನಿಧನ ವೈಯಕ್ತಿಕವಾಗಿ ಹಾಗೂ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ ಎಂದು ತಿಳಿಸಿದ್ದಾರೆ. ಉತ್ತಮ ಸಂಘಟಕ, ಸ್ನೇಹಜೀವಿ ಮತ್ತು ಸೌಜನ್ಯದ ವ್ಯಕ್ತಿತ್ವ ಹೊಂದಿದ್ದ ಅವರು ಪಕ್ಷ ಸಂಘಟನೆಗೆ ಜೀವನವನ್ನೇ ಸಮರ್ಪಿಸಿದ್ದರು ಎಂದು ಕಂಬನಿ ಮಿಡಿದಿದ್ದಾರೆ.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಸಂತಾಪ ಸೂಚಿಸಿ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಕನಸುಗಳೊಂದಿಗೆ ಸಾಗುತ್ತಿದ್ದ ಯುವ ನಾಯಕನ ಅಕಾಲಿಕ ನಿಧನ ನೋವಿನ ಸಂಗತಿ ಎಂದು ಹೇಳಿದ್ದಾರೆ. ಸೂರಜ್ ಹೆಗ್ಡೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಎಲ್ಲ ನಾಯಕರು ಪ್ರಾರ್ಥಿಸಿದ್ದಾರೆ.



