Thursday, June 11, 2026
Google search engine

Homeಅಪರಾಧಬೆನಿಫಿಟ್ ಸ್ಕೀಂ ವಂಚನೆ ಆರೋಪ ಸಾವಿರಾರು ಮಹಿಳೆಯರಿಗೆ ಮೋಸ : ದಂಪತಿ ವಿರುದ್ಧ ಠಾಣೆಗೆ ದೂರು

ಬೆನಿಫಿಟ್ ಸ್ಕೀಂ ವಂಚನೆ ಆರೋಪ ಸಾವಿರಾರು ಮಹಿಳೆಯರಿಗೆ ಮೋಸ : ದಂಪತಿ ವಿರುದ್ಧ ಠಾಣೆಗೆ ದೂರು

ಕೆ.ಆರ್.ನಗರ : ದೀಪಾವಳಿ ಮತ್ತು ಗೌರಿ ಗಣೇಶ ಹಾಗೂ ಗ್ರಾಮದೇವತೆಗಳ ಹಬ್ಬಗಳಿಗೆ ಕಡಿಮೆ‌ ದರದಲ್ಲಿ ಆಹಾರ ಪದಾರ್ಥಗಳನ್ನು ನೀಡುವುದಾಗಿ ಕಂತಿನ ಮೂಲಕ ಹಣ ಪಾವತಿಸಿಕೊಂಡ ದಂಪತಿಗಳಿಬ್ಬರು ಸಾವಿರಾರು ಮಂದಿಗೆ ಮೋಸ‌ ಮಾಡಿರುವ ಸಂಬಂಧ ದೂರು ನೀಡಲಾಗಿದೆ.

ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ನಿವಾಸಿ ಕೆಎಸ್ ಆರ್ ಟಿಸಿ ಹುಣಸೂರಿನ. ಬಸ್ ಘಟಕದಲ್ಲಿ ಚಾಲಕನಾಗಿರುವ ಕೀರ್ತಿ ಮತ್ತು ಆತನ ಪತ್ನಿ ಅಂಗನವಾಡಿ ಶಿಕ್ಷಕಿಯಾಗಿರುವ ಸುನೀತಾ ಅವರ ವಿರುದ್ದ ವಂಚನೆಯ ದೂರು ನೀಡಲಾಗಿದೆ.
ಈ ಸಂಬಂಧ ಠಾಣೆಗೆ ಲಿಖಿತವಾಗಿ ಇವರಿಬ್ಬರ ವಿರುದ್ದ ದೂರು‌ನೀಡಿರುವ ಹೊಸ ಅಗ್ರಹಾರ ಗ್ರಾಮದ ಸ್ಪಂದನ ಆನಂತರ 300ಕ್ಕೂ ಅಧಿಕ ಮಹಿಳೆಯರೊಂದಿಗೆ ಠಾಣೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ ಕಡಿಮೆ ದರದಲ್ಲಿ ಹಬ್ಬಗಳಿಗೆ ಆಹಾರ ಪದಾರ್ಥಗಳನ್ನು ನೀಡುತ್ತೇವೆ ಎಂದು ನನ್ನನ್ನು ನಂಬಿಸಿದ್ದರಿಂದ ಅವರ ಮಾತಿಗೆ ಮರುಳಾದ ನಾನು 53 ಮಂದಿ ಮಹಿಳೆಯರಿಂದ ತಲಾ 3500 ರೂಗಳಂತೆ 1 ಲಕ್ಷದ 85 ಸಾವಿರ ರೂ ಹಣವನ್ನು ಪೋನ್ ಪೇ ಮತ್ತು ನಗದು ರೂಪದಲ್ಲಿ ನೀಡಿದ್ದೇವೆ ಎಂದು ಮಾಹಿತಿ ನೀಡಿದ್ದರು.

ಹೊಸ ಅಗ್ರಹಾರ ಸೇರಿದಂತೆ ಮಂಡಿಗನಹಳ್ಳಿ, ಹರಂಬಳ್ಳಿ, ಹರಂಬಳ್ಳಿಕೊಪ್ಪಲು, ಸಾಲಿಗ್ರಾಮ, ತಂದ್ರೆ ಅಂಕನಹಳ್ಳಿ, ಅರ್ಜುನ ಹಳ್ಳಿ, ಹಂಪಾಪುರ, ಚಿಕ್ಕವಡ್ಡರಗುಡಿ, ಬೊಮ್ಮೆನಹಳ್ಳಿ, ಗಂಧನಹಳ್ಳಿ, ಭೇರ್ಯ, ಗುಳುವಿನ ಅತ್ತಿಗುಪ್ಪೆ, ಬೋರೇಗೌಡನಕೊಪ್ಪಲು, ಅಂಕನಹಳ್ಳಿ ಸೇರಿದಂತೆ ನಮ್ಮ ತಾಲೂಕಿನ ಇತರ ಹತ್ತಾರು ಗ್ರಾಮಗಳು ಹಾಗೂ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು, ಜೈನಹಳ್ಳಿ, ಚಿಟ್ಟೇನಹಳ್ಳಿ, ಸೇರಿದಂತೆ ಹತ್ತಾರು ಗ್ರಾಮಗಳಿಂದ ಅಮಾಯಕ‌ ಮಹಿಳೆಯ ಮೂಲಕ ತಲಾ 3500 ರೂಪಾಯಿ ವಸೂಲು ಮಾಡಿದ್ದಾರೆ ಎಂದು ಠಾಣೆಗೆ ಬಂದಿದ್ದ ನೂರಾರು‌ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.

ಮಹಿಳೆಯರನ್ನು ವಂಚಿಸಿ ಹಣ ದೋಚುವ ದಂಧೆಯನ್ನು ಮೈಗೂಡಿಸಿಕೊಂಡಿರುವ ಇವರುಗಳು ನಾವು ಕಂತಿನ ಮೂಲಕ ಕಟ್ಟಿರುವ ಹಣವನ್ನು ವಾಪಾಸ್ ಕೇಳಲು ಹೋದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಮತ್ತು ನಿಮ್ಮ‌ವಿರುದ್ದ ಠಾಣೆಗೆ ದೂರು ನೀಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದು ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಣ್ಣೀರು ಹಾಕಿದರು.

ಈ ಸಂಬಂಧ ನಾವುಗಳು ನೆನ್ನೆ ಹೊಸ ಅಗ್ರಹಾರ ಗ್ರಾಮಕ್ಕೆ ಕಾರ್ಯನಿಮಿತ್ತ ಆಗಮಿಸಿದ್ದ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಡಿವೈಎಸ್ಪಿ ರಾಜಣ್ಣ, ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಅವರುಗಳಿಗೆ ದೂರು ನೀಡಿದಾಗ ಕೆ.ಆರ್.ನಗರ ಠಾಣೆಗೆ ಬಂದು ದಾಖಲೆ ಸಮೇತ ದೂರು ನೀಡುವಂತೆ ಸೂಚನೆ ನೀಡಿದ ಹಿನ್ನಲೆಯಲ್ಲಿ‌ ಇಂದು ಇಲ್ಲಿಗೆ ಬಂದಿದ್ದೇವೆ ಎಂದು‌ ಮಹಿಳೆಯರು ಹೇಳಿದರು.

ಹಬ್ಬ ಹರಿದಿನಗಳಿಗೆ ಕಡಿಮೆ ದರದಲ್ಲಿ ಆಹಾರ ಪದಾರ್ಥಗಳನ್ನು ಪಡೆಯಲು ಕಂತಿನ ರೂಪದಲ್ಲಿ ಹಣ ಪಾವತಿಸಿರುವ ಬೆನಿಫಿಟ್ ಸ್ಕೀಂ ನ ಕಾರ್ಡ್ ಗಳನ್ನು ಮಾಧ್ಯಮವರಿಗೆ ತೋರಿಸಿ ಹಣ ವಾಪಾಸ್ ಭರಿಸಬೇಕೆಂದು ಅಲವತ್ತುಕೊಂಡರು.
ಈ ಸಂದರ್ಭದಲ್ಲಿ ಭಾಗ್ಯಮ್ಮ, ವೀಣಾ, ರೇಣುಕಾ, ಕಲ್ಪನಾ, ಪೂವಮ್ಮ, ಕುಮಾರಿ, ಭುವನೇಶ್ವರಿ, ಶೀಲಾ, ಮಹದೇವಮ್ಮ, ರಶ್ಮಿ, ಪಲ್ಲವಿ, ಜಯಂತಿ ಸೇರಿದಂತೆ ನೂರಾರು ಮಹಿಳೆಯರು ಇದ್ದರು.

RELATED ARTICLES
- Advertisment -
Google search engine

Most Popular